ಲೇಖಕರು - ಶ್ರೀಮತಿ ಡಿ. ಕೋಮಲ, ರಾಯಚೂರು
ಗುರುಶ್ರೀ ವಿ. ಎಸ್. ಕಾಂತನವರ ಅವರು ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಛಂದೋಬದ್ಧ ಪದ್ಯಗಳನ್ನು ಸೃಜಿಸಿರುವ ಶಬ್ದ ಗಾರುಡಿಗ. ರಾಯಚೂರಿನ ಟ್ಯಾಗೋರ್ ಸ್ಮಾರಕ ಬಾಲಕರ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಶಿಕ್ಷಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಕಾಂತನವರ ಅವರಿಂದ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇಂದಿಗೂ ತಮ್ಮ ನೆಚ್ಚಿನ ಗುರುಗಳು ಪಂಡಿತಜೀ ಎಂದು ನೆನಪಿಸಿಕೊಳ್ಳುತ್ತಾರೆ.
ಕಾಂತನವರ ಹಿಂದಿ ಭಾಷಾ ಪ್ರೇಮ ತರಗತಿಯಿಂದ ಆಚೆಗೂ ಹರಡಿಕೊಂಡಿತ್ತು. ಹಲವು ದಶಕಗಳ ಕಾಲ ಹಿಂದಿ ಪರೀಕ್ಷೆಗಳನ್ನು ನಡೆಸುವುದರ ಮೂಲಕ ಹಿಂದಿ ಭಾಷೆಯ ಪ್ರಚಾರ ಕಾರ್ಯ ಮಾಡಿದ್ದಲ್ಲದೆ ಆ ಪರೀಕ್ಷೆಗಳ ಸಹಾಯದಿಂದ ನೂರಾರು ಜನ ಜೀವನೋಪಾಯವನ್ನು ಕಂಡುಕೊಂಡಿದ್ದಾರೆ. ಕಾಂತನವರು ಹಿಂದಿ ಪ್ರೇಮಿ ಮಂಡಲ, ಹಿಂದಿ ಸಮನ್ವಯ ಸಮಿತಿ ಗಳಂತಹ ಸಂಸ್ಥೆಗಳನ್ನು ಹುಟ್ಟುಹಾಕಿ, ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿರುತ್ತಾರೆ. ಸ್ವತಃ ಲೇಖಕರಾಗಿದ್ದರಿಂದ ಆನೇಕ ಲೇಖನಗಳನ್ನು ಕವನಗಳನ್ನು ರಚಿಸಿರುತ್ತಾರೆ.
ವಿ. ಎಸ್. ಕಾಂತನವರ ‘ಪ್ರೇರಣಾ’ ಹಿಂದಿ ಕವನ ಸಂಕಲನವು 1977 ರಲ್ಲಿ ರವೀಂದ್ರ ಪ್ರಕಾಶನ ದಿಂದ ಪ್ರಕಟಗೊಂಡಿತು. 2005ರಲ್ಲಿ ಮರು ಮುದ್ರಣ ಮಾಡಲಾಯಿತು. ಶೀರ್ಷಿಕೆ ಪದ್ಯವಾದ ‘ಪ್ರೇರಣಾ’ ಕವಿತೆಯು
ಪ್ರೇರಣಾ ಕೆ ಫೂಲ್ ಸುಂದರ
ಹಾರ ಮೆ ಗೂಂಥಾ ಹುವಾ
ನೀಲ ಅಂಬುಜ ಸದೃಶ ಮಾಧವ
ಪೂಜನ ಮೈ ಚಲ್ ಪಡಾ ||
ಪ್ರೇರಣೆಯೆಂಬುವ ಹೂಗಳ ಸುಂದರ ಮಾಲೆಯಿಂದ ನೀಲ ವರ್ಣದ ಮಾಧವನ ಪೂಜಿಸಲು ಹೊರಟಿರುವೆ ಎಂದು ಹೇಳುತ್ತಾ ಪ್ರೇರಣೆ ಎಲ್ಲೆಲ್ಲಿಂದ ಸಿಗುತ್ತದೆ ಎಂಬುದನ್ನು ವರ್ಣಿಸುತ್ತಾ ಹೋಗುತ್ತಾರೆ. ಸೂರ್ಯ ಚಂದ್ರ ನಕ್ಷತ್ರಗಳಿಂದ , ಎಲೆ ಹೂ ಬಳ್ಳಿಗಳಿಂದ, ಸಾಧು ಸಂತ ಮಹಂತರ ಅಮರ ವಾಣಿಯಿಂದ, ಯಂತ್ರ ಯುಗದ ಸಾಧಕರಿಂದ ಅಷ್ಟೇ ಅಲ್ಲ ರಾಜನೀತಿಯ ತಂತ್ರಗಳಿಂದಲೂ ಪ್ರೇರಣೆ ಸಿಗುತ್ತದೆ ಎಂದಿದ್ದಾರೆ. ಹೀಗೆ ವರ್ಣಿಸುತ್ತಾ ಕೊನೆಯ ನುಡಿಯಲ್ಲಿ ವಿಶ್ವದೆಲ್ಲೆಡೆ ಅರಳಿಕೊಂಡಿವೆ ಪ್ರೇರಣೆಯ ಹೂಗಳು ಒಂದು ವೇಳೆ ನೀನು ಅವುಗಳನ್ನು ಆಯ್ದುಕೊಳ್ಳದಿದ್ದರೆ ಕಾಲವು ನಿನ್ನನ್ನು ನೋಡಿ ಹಾಸ್ಯ ಮಾಡುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.
‘ವೀರ ಭಾರತ’ ಕವಿತೆಯಲ್ಲಿ ಭಾರತೀಯರ ಶೌರ್ಯ ಪರಾಕ್ರಮಗಳನ್ನು ಬಿಂಬಿಸಿದ್ದಾರೆ. ಭಾರತದ ಪ್ರತಿಯೊಂದು ಮೈದಾನವು ಕುರುಕ್ಷೇತ್ರಕ್ಕೆ ಸಮಾನ. ಛತ್ರಪತಿ ಶಿವಾಜಿಯ ದಿಟ್ಟತನ, ರಾಣಾ ಪ್ರತಾಪರ ಹಲ್ದಿಘಾಟಿಯ ಹೋರಾಟ, ದುಷ್ಯಂತನ ಮಗ ಭರತ ಚಕ್ರವರ್ತಿಯ ಯುದ್ಧ ವೈಖರಿ ಮುಂತಾದ ವೀರೋಚಿತ ಅಂಶಗಳನ್ನು ಉಲ್ಲೇಖಿಸುತ್ತಾ ಭಾರತದ ಪ್ರತಿಯೊಬ್ಬ ನಾರಿಯು ದುರ್ಗೆಯ ಅವತಾರ ಎಂದಿದ್ದಾರೆ. ದೇಶ ಧರ್ಮದ ವೀರ ತೇಜದ ಶಕ್ತಿ ದೇವತೆಗೆ ಜಯಕಾರ ಹಾಕಿದ್ದಾರೆ. ‘ಭಾರತ ವೀರ’ ಕವಿತೆಯಲ್ಲಿ ನಮ್ಮ ಸೈನಿಕರ ಶಕ್ತಿಯ ಪರಾಕಾಷ್ಠೆಯನ್ನು ಪರಿಚಯಿಸಿದ್ದಾರೆ. ‘ಮಿಲನ’ ಕವಿತೆಯಲ್ಲಿ ಪ್ರಕೃತಿಯ ವಿವಿಧ ತತ್ವಗಳಲ್ಲಿ ಮಿಲನದ ಸ್ವರೂಪವನ್ನು ಕಂಡಿದ್ದಾರೆ. ನವಿರಾದ ಭಾವಗಳನ್ನು ಮಾತ್ರವಲ್ಲ ‘ಮಾನವ ಮನ’ ಕವಿತೆಯಲ್ಲಿ ಸಮಾಜದಲ್ಲಿ ಕಾಣುವ ಮಾನವನ ಕರಾಳ ಮುಖದ ಪರಿಚಯ ಮಾಡಿಸಿದ್ದಾರೆ. ‘ಗಾಂಧಿ ಸುಪ್ರಭಾತ’ ಕವಿತೆಯಲ್ಲಿ ಮಹಾತ್ಮ ಗಾಂಧಿ ಯವರಿಗೆ ‘ಹಿಂಸಾರಿ ಸತ್ಯಮೂರ್ತಿ ತವ ಸುಪ್ರಭಾತಂ’ ಎಂದಿದ್ದಾರೆ. ‘ಕವೀಂದ್ರ ರವೀಂದ್ರ’ ಕವಿತೆಯಲ್ಲಿ ಗುರುದೇವ ರವೀಂದ್ರನಾಥ ಟ್ಯಾಗೋರರ ಗೀತಾಂಜಲಿ ಕಾವ್ಯೋದ್ಯಾನದ ಚಂದನವಾಗಿದೆ ಎಂದು ಬಣ್ಣಿಸಿದ್ದಾರೆ. ‘ಪ್ರೇಮಚಂದ’ ಕವಿತೆಯಲ್ಲಿ ಅವರ ಕಾಲದ ಪರಿಸ್ಥಿತಿಗಳು ಹಾಗೂ ಅವರ ಸಾಹಿತ್ಯಕ್ಕೆ ಇದ್ದ ಶಕ್ತಿಯನ್ನು ಉದ್ಗರಿಸಿದ್ದಾರೆ.
ededore news
ದ್ವಾಪರ ಕಾ ಜ್ಞಾನ ಭಂಡಾರ ಯಹ ಕಲಿಯುಗ ಮೆ
ಸೋಪಾನ ಬನಗಯಾ ಮುಕ್ತಿ ಪಥ ಕೊ ||
ಎಂದು ಆರಂಭವಾಗುವ ‘ಭಗವದ್ಗೀತಾ‘ ಕವಿತೆಯಲ್ಲಿ ಕೃಷ್ಣನ ಗೀತೋಪದೇಶದ ಪ್ರಸಂಗದ ವರ್ಣನೆ ಇದೆ. ‘ಸ್ಮರಣ’ ಕವಿತೆಯಲ್ಲಿ ಪೌರಾಣಿಕವಾಗಿ, ಐತಿಹಾಸಿಕವಾಗಿ, ಸಾಮಾಜಿಕವಾಗಿ ವಿಶೇಷ ಸಾಧನೆ ಮಾಡುವಲ್ಲಿ ಗುರುತಿಸಿಕೊಂಡ ನಾರಿಯರ ಅಂದರೆ ಸ್ತ್ರೀಶಕ್ತಿಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಸೀತೆ, ರಾಧೆ, ಪಾರ್ವತಿ, ಲಕ್ಷ್ಮಿಯರಿಂದ ಮೊದಲುಗೊಂಡು ಗಾರ್ಗಿ ಮೈತ್ರೆಯಿ, ಸುಲಭಾ, ಸಾವಿತ್ರಿ, ಕಾತ್ಯಾಯಿನಿ ಸೇರಿದಂತೆ ಅಕ್ಕಮಹಾದೇವಿ, ರಾಣಿ ಚೆನ್ನಮ್ಮ, ರತ್ನಾವಳಿ, ಪನ್ನಾ ಧಾಯಿ, ದುರ್ಗಾವತಿ, ಕಸ್ತೂರಬಾ ಗಾಂಧಿ ವರೆಗೆ ಎಲ್ಲರನ್ನು ಸ್ಮರಿಸಿದ್ದಾರೆ.
ಸೆಪ್ಟೆಂಬರ್ 14, 1949 ರಂದು, ಭಾರತದ ಸಂವಿಧಾನ ಸಭೆಯು ದೇವನಾಗರಿ ಲಿಪಿಯಲ್ಲಿ ಬರೆಯಲಾದ ಹಿಂದಿಯನ್ನು ಭಾರತದ ಗಣರಾಜ್ಯದ ಅಧಿಕೃತ ಭಾಷೆಯಾಗಿ ಅಳವಡಿಸಿಕೊಂಡಿತು. ಹೀಗಾಗಿ ಪ್ರತಿ ವರ್ಷ ಸೆಪ್ಟೆಂಬರ್ 14ರಂದು ಹಿಂದಿ ದಿವಸವನ್ನು ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಕಾಂತನವರ ಪ್ರೇರಣಾ ಕವನ ಸಂಕಲನ ಓದುಗರಿಗೆ ಭಾಷಾಭಿಮಾನದ ಜೊತೆಗೆ ಭಾರತೀಯ ಪರಂಪರೆಯ ದರ್ಶನ ಮಾಡಿಸುತ್ತದೆ, ರಾಷ್ಟ್ರಪ್ರೇಮ, ಸಾಹಿತ್ಯ ಪ್ರೇಮಗಳನ್ನು ಹೆಚ್ಚಿಸುತ್ತದೆ. ಅವರ ಭೌತಿಕ ಅನುಪಸ್ಥಿತಿಯ ಈ ಬಾರಿಯ ಹಿಂದಿ ದಿವಸ ‘ಪ್ರೇರಣಾ’ ಮೂಲಕ ಹೊಸ ಪ್ರೇರಣೆಯನ್ನು ನೀಡುತ್ತಲಿದೆ. ಅವರದ್ದೇ ಆಶಯವನ್ನು ಉಲ್ಲೇಖಿಸುತ್ತಾ ಲೇಖನಕ್ಕೆ ವಿರಾಮ ನೀಡುವೆ. ಎಲ್ಲರಿಗೂ ಹಿಂದಿ ದಿವಸದ ಶುಭಾಶಯಗಳು.
‘ಏಕ ಹೃದಯ ಹೋ ಭಾರತ ಜನನಿ’








