ರಾಯಚೂರು: ನಗರದಿಂದ ಸಂಗ್ರಹಿಸಲಾದ ತ್ಯಾಜ್ಯದಲ್ಲಿನ ಖಾಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಧಾರವಾಡ ಮೂಲದ ಆರ್ಟ್ ವ್ಯಾಲಿ ಸಂಸ್ಥೆ ತಯಾರಿಸಿದ ಆನೆ ಕಲಾಕೃತಿಯನ್ನು ಸೋಮವಾರ ಉದ್ಘಾಟಿಸಲಾಯಿತು.
ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಲೋಗೊ ಹೊಂದಿರುವ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ ಆನೆ ಕಲಾಕೃತಿಯನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ‘ನಿಮ್ಮ ಬಾಗಿಲಿಗೆ ಮಹಾನಗರ ಪಾಲಿಕೆ’ ಕಂದಾಯ ಅದಾಲತ್ ಹಂತ-2 ಕಾರ್ಯಕ್ರಮಕ್ಕೆ ಡಿಜಿಟಲ್ ಲಾಗಿನ್ ಮೂಲಕ ಚಾಲನೆ ನೀಡಿದರು. ಕಂದಾಯ ಅದಾಲತ್‌ನಲ್ಲಿ ವಿಚಾರಣೆ ನಡೆಸಲಾದ 10 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಇ-ಖಾತಾ ವಿತರಿಸಲಾಯಿತು.
ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಸಾಂಕೇತಿಕವಾಗಿ ಕಿಟ್‌ಗಳನ್ನು ಹಾಗೂ ಡ್ರೈವರ್‌ಗಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು.
ನಂತರ ಸಚಿವರು ರಾಯಚೂರು ಮಹಾನಗರ ಪಾಲಿಕೆ ಹಾಗೂ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನಗರಾಭಿವೃದ್ಧಿಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳು ಹಾಗೂ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ದದ್ದಲ್, ಎನ್.ಎಸ್. ಬೋಸರಾಜು, ವಸಂತಕುಮಾರ, ರಾಜಶೇಖರ ರಾಮಸ್ವಾಮಿ, ಪೂವಿತಾ ಎಸ್., ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹಾಪಾತ್ರ, ಪ್ರಮುಖರಾದ ಜಯಣ್ಣ, ಕೆ. ಶಾಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.








