ಶ್ರಾವಣ ಮಾಸದ ಪ್ರಯುಕ್ತ ಹೊಸಪೇಟೆಯಿಂದ ಮನ್ಸಲಾಪುರಕ್ಕೆ ಯಾತ್ರೆ

ಮಳೆ-ಬೆಳೆ ಸಮೃದ್ಧಿಗಾಗಿ ಎಲ್ಲರೂ ಪ್ರಾರ್ಥಿಸೋಣ: ಪಂಚಮಲಿಂಗ ಶ್ರೀ

ರಾಯಚೂರು: ಶ್ರಾವಣ ಮಾಸದ ಪ್ರಯುಕ್ತ ತಾಲೂಕಿನ ಹೊಸಪೇಟೆಯ ಕೆಂಪಿನ ಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ರವಿವಾರ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಪಾದಯಾತ್ರೆ ಶ್ರದ್ಧಾ-ಭಕ್ತಿಪೂರ್ವಕವಾಗಿ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ಶ್ರೀಮಠದಿಂದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಶಿವಭಜನೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಮನ್ಸಲಾಪುರದ ಬೆಟ್ಟದಲ್ಲಿರುವ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದವರೆಗೆ ನಡೆದು, ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಯನ್ನು ಸಂಪನ್ನಗೊಳಿಸಲಾಯಿತು. ಬಳಿಕ ದೇವಸ್ಥಾನದ ಬಯಲು ಆಲಯದಲ್ಲಿಯೇ ಧರ್ಮಸಭೆ ನಡೆಸಲಾಯಿತು.

ಈ ವೇಳೆ ಆಶೀರ್ವಚನ ನೀಡಿದ ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ಮಠದ ಶ್ರೀ ಪಂಚಮ ಸಿದ್ಧಲಿಂಗ ಸ್ವಾಮೀಜಿ, ಬಹಳ ಸುಂದರವಾಗಿ ಹಾಗೂ ವಿಜೃಂಭಣೆಯಿಂದ ಪಾದಯಾತ್ರೆ ಯಶಸ್ವಿಯಾಗಿದೆ. ದೈಹಿಕವಾಗಿ ಸುಸ್ತಾಗಿರಬಹುದು. ಆದರೆ, ಮಾನಸಿಕವಾಗಿ ಗಟ್ಟಿಯಾಗಿದ್ದೇವೆ. ದೇವರ ಆಶೀರ್ವಾದ ಇದ್ದಾಗ ಮಾತ್ರ ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯ. ಗುರುಗಳ ಶಕ್ತಿಯಿಂದ ಎಂಥ ಕೆಲಸ ಬೇಕಾದರೂ ಮಾಡಲು ಸಾಧ್ಯ ಎಂಬುದಕ್ಕೆ ಈ ಕಾರ್ಯಕ್ರಮ ಉತ್ತಮ ನಿದರ್ಶನ. ದೇವರ ನಾಮಸ್ಮರಣೆಯಿಂದ ಮನಸ್ಸಿನ ಕಲ್ಮಶ ಕಳೆದು ಶುದ್ಧ ಮನಸ್ಕರಾಗಲು ಸಾಧ್ಯ. ನಮ್ಮ ಕಷ್ಟ-ಕಾರ್ಪಣ್ಯ ದೂರವಾಗಬೇಕು ಎಂಬ ಕಾರಣಕ್ಕೆ ಇಂಥ ಕಾರ್ಯಕ್ರಮಗಳು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿವೆ. ದೇವರಲ್ಲಿ ನಮ್ಮ ತಪ್ಪುಗಳನ್ನು ಮನ್ನಿಸಿ, ಮಳೆ-ಬೆಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದರು.

ವ್ಯಕ್ತಿಗಳು ಒಂದಲ್ಲ ಒಂದು ದುಶ್ಚಟಕ್ಕೆ ತುತ್ತಾಗಿರುತ್ತಾರೆ. ಇಂದಿನಿಂದ ಒಂದೊಂದಾಗಿ ದುರುಭ್ಯಾಸಗಳನ್ನು ಬಿಡುತ್ತೇವೆ ಎಂಬ ಸಂಕಲ್ಪ ಮಾಡಬೇಕು. ನಮ್ಮನ್ನು ಅರಿತು ಬಾಳಬೇಕು. ಬಸವಾದಿ ಶರಣರು ಹೇಳಿದಂತೆ ಭಕ್ತಿ, ಕಾಯಕ, ದಾಸೋಹ ತತ್ವಗಳನ್ನು ಶ್ರದ್ಧೆಯಿಂದ ಪಾಲಿಸೋಣ ಎಂದು ಕರೆ ನೀಡಿದರು.

ಅಡವಿ ಅಮರೇಶ್ವರ ಮಠದ ಶ್ರೀ ತೊಂಟಾದರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಇಂಥದ್ದೊಂದು ಪಾದಯಾತ್ರೆ ಕಾರ್ಯಕ್ರಮ ನಡೆಯಬೇಕಾದರೆ ದೈವ ನಿರ್ಣಯವೇ ಆಗಬೇಕು. ಏಳು ಕೋಟಿ ಮಂತ್ರಗಳಲ್ಲಿ ಶಿವನಾಮ ಸ್ಮರಣೆಗೆ ವಿಶೇಷ ಶಕ್ತಿ ಇದೆ. ಅಂಥ ಶಿವನಾಮವನ್ನು ಜಪಿಸುತ್ತ ಭಕ್ತರು ಪಾದಯಾತ್ರೆ ನಡೆಸಿದ್ದಾರೆ. ಜಂಗಮ ಮೂರ್ತಿಗಳ ಪಾದಸ್ಪರ್ಶದಿಂದ ಪುಣ್ಯಶಕ್ತಿ ಸಿಗಲಿದೆ. ಇಂದು ಕೆಂಪಿನ ಮಠದ ಶ್ರೀಗಳು ನಿಮ್ಮೂರಿಗೆ ನಡೆದು ಬಂದಿದ್ದಾರೆ. ದೇವರಿಗೆ ಎಲ್ಲರೂ ಸೇರಿ ಭಕ್ತಿಯಿಂದ ಬೇಡಿಕೊಳ್ಳೋಣ. ದೇವರ ಕೃಪೆಯಿಂದ ಮಳೆ-ಬೆಳೆ ಸಮೃದ್ಧಿಯಾಗಲಿ ಎಂದು ಆಶಿಸಿದರು.

ಕೆಂಪಿನ ಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲ ಚಿಂತೆಗಳನ್ನು ಮರೆತು ದೇವರ ನಾಮಸ್ಮರಣೆ ಮಾಡಿದ ಜೀವನವೇ ಪಾವನವಾಗಲಿದೆ. ಜಂಜಾಟದ ಈ ಮಾನವ ಜನ್ಮವನ್ನು ಸುಂದರಗೊಳಿಸಬೇಕು. ನಮ್ಮ ಜೀವನವನ್ನು ನಾವೇ ತಿದ್ದಿಕೊಳ್ಳಬೇಕು. ಅಂದಾಗಲೇ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ. ದೇವರು ಕೊಟ್ಟ ಈ ಬದುಕನ್ನು ಅರ್ಥಪೂರ್ಣವಾಗಿ ಬಾಳಬೇಕು ಎಂದರು.

ಗ್ರಾಮದ ಮುಖಂಡ ಸಿದ್ಧನಗೌಡ ಕಾರ್ಯಕ್ರಮ ನಿರೂಪಿಸಿದರು. ಗ್ರಾಮದ ಮುಖಂಡರು ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Previous articleಸಹಕಾರಿ ಸಂಘಗಳ ಯಶಸ್ಸಿಗೆ ಠೇವಣಿದಾರರು, ಗ್ರಾಹಕರ ಬೆಂಬಲವೇ ಆಧಾರ: ಡಾ. ಚಂದ್ರಶೇಖರ್ ಸಜ್ಜನ್
Next article2029ರ ವೇಳೆಗೆ ‘ಮಾದಕ ವಸ್ತು ಮುಕ್ತ ಭಾರತ’ ನಿರ್ಮಾಣ: ಅಮಿತ್ ಶಾ