ಸಿರವಾರ: ತೀವ್ರ ಮಳೆ ಅಭಾವ ಎದುರಿಸುತ್ತಿದ್ದರೂ ಸಿರವಾರ, ಸಿಂಧನೂರು ಮತ್ತು ಮಾನ್ವಿ ತಾಲೂಕುಗಳನ್ನು ಆರಂಭದಲ್ಲಿ ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿದ್ದು ಸ್ಥಳೀಯ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಸರ್ಕಾರದ ಈ ನಿರ್ಧಾರದ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದ ಕೃಷಿಕರು, ತಕ್ಷಣವೇ ಕಂದಾಯ ಇಲಾಖೆಯು ಮರು-ಸಮೀಕ್ಷೆ ನಡೆಸಿ ಸಿರವಾರವನ್ನು ಬರಪೀಡಿತ ಪ್ರದೇಶವೆಂದು ಅಧಿಕೃತವಾಗಿ ಘೋಷಿಸಬೇಕೆಂದು ಆಗ್ರಹಿಸಿದ್ದರು.
ರೈತರ ಆಕ್ರೋಶದ ತೀವ್ರತೆಯನ್ನು ಅರಿತ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಕಾರ್ಯಪ್ರವೃತ್ತರಾದರು. ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಗಮನ ಸೆಳೆದು, ಮರು ಪರಿಶೀಲನೆಗೆ ಒತ್ತಡ ಹೇರಿದರು.
ಜನಪ್ರತಿನಿಧಿಗಳ ಹಾಗೂ ರೈತರ ಸತತ ಪ್ರಯತ್ನದ ಫಲವಾಗಿ ಸರ್ಕಾರವು ಇದೀಗ ಧನಾತ್ಮಕವಾಗಿ ಸ್ಪಂದಿಸಿದೆ.
ಸಿರವಾರ ಮತ್ತು ಸಿಂಧನೂರು ತೀವ್ರ ಬರಪೀಡಿತ ಪರಿಸ್ಥಿತಿಯ ‘ಗ್ರೌಂಡ್ ಟ್ರೂಥಿಂಗ್’ (ಸ್ಥಳ ಪರಿಶೀಲನೆ) ಪಟ್ಟಿಗೆ ಸೇರ್ಪಡೆ,ಮಾನ್ವಿ ಯನ್ನು ಸಾಧಾರಣ ಬರ ಪರಿಸ್ಥಿತಿಯ ಮರು ಪರಿಶೀಲನಾ ಪಟ್ಟಿಗೆ ಸೇರ್ಪಡೆ ಗೊಳಿಸಲಾಗಿದೆ.
ಸರ್ಕಾರದ ಈ ತಕ್ಷಣದ ಕ್ರಮದಿಂದಾಗಿ ಸಿರವಾರ ಭಾಗದ ಅನ್ನದಾತರಲ್ಲಿ ಆಶಾಭಾವನೆ ಮೂಡಿದ್ದು, ಕೊಂಚ ನಿರಾಳತೆಯ ನಿಟ್ಟುಸಿರು ಬಿಡುವಂತಾಗಿದೆ.








