​ಸಿರವಾರ: ತಾಲೂಕಿನ ಮೂಲಕ ಹಾದುಹೋಗಿರುವ 9ಎ ಕಾಲುವೆ ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಿ, ಸಮರ್ಪಕ ನಿರ್ವಹಣೆಯೊಂದಿಗೆ ತಕ್ಷಣ ರೈತರ ಜಮೀನುಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ವಡವಟ್ಟಿ, ಹಣಿಗಿ, ಪಾತಾಪುರ ಸೇರಿದಂತೆ 15ಕ್ಕೂ ಹೆಚ್ಚು ಹಳ್ಳಿಗಳ ನೂರಾರು ರೈತರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

​ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, “9ಎ ಕಾಲುವೆ ಕಾಮಗಾರಿ ಅರೆಬರೆಯಾಗಿ ಸಾಗುತ್ತಿದ್ದು, ಅತ್ಯಂತ ಆಮೆಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಅಕ್ರಮವಾಗಿ ಬಿಲ್ಲುಗಳನ್ನು ಎತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಂಪೂರ್ಣ ನಿರ್ಲಕ್ಷ್ಯದಿಂದಾಗಿ ಸಾವಿರಾರು ಎಕರೆ ಕೃಷಿ ಭೂಮಿಗೆ ನೀ ಸಿಗದೆ, ಹತ್ತಾರು ಹಳ್ಳಿಗಳ ರೈತರ ನೀರಾವರಿ ಕನಸು ನನಸಾಗದೇ ಉಳಿದಿದೆ. ಇಲಾಖೆಯ ಸುಪರಿಂಟೆಂಡೆಂಟ್ ಇಂಜಿನಿಯರ್ ಹಾಗೂ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರುಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ ರೈತರ ಜಮೀನುಗಳಿಗೆ ನೀರು ತಲುಪಿಸಬೇಕು,” ಎಂದು ಆಗ್ರಹಿಸಿದರು.

​ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಅಶೋಕ ಪವಾರ ಅವರು, ಸಂಬಂಧಪಟ್ಟ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಶೀಘ್ರವೇ ರೈತರಿಗೆ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ತಹಸೀಲ್ದಾರರ ಭರವಸೆಯ ಮೇರೆಗೆ ರೈತರು ತಮ್ಮ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದರು.

​ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಮರೇಶ ಗೌಡ ಪನ್ನೂರು ಚಾಗಭಾವಿ, ಬಸವರಾಜಯ್ಯ ಸ್ವಾಮಿ, ತಿಮ್ಮನಗೌಡ, ಚಂದ್ರು ನಾಗರಾಳ, ಶಿವರಾಜ ಕಲಂಗೇರ, ಶರಣಪ್ಪ ಪಾತಾಪುರ, ಯಮುನಪ್ಪ ದಿನ್ನಿ, ಬಸವರಾಜ ಕವಿತಾಳ, ಬಸವರಾಜ ಕಾವಲಿ, ಮಾರಪ್ಪ ತೆಲುಗು, ಶಿವಪ್ಪ ಹರಿಜನ, ಶಿವಪ್ಪ ಚಂಡೂರು, ಹನುಮಂತ ಕಟಿಕೇರ್, ಶಿವರಾಜ ಹುಲ್ಲೂರು, ಹನುಮಂತ್ರಾಯ, ಚಂದ್ರಪ್ಪ ಗೌಡ ಇಟಿಗಿ, ಪಂಪಣ್ಣ ಮೂಲಿಮನಿ, ಬಸವ ನಾಸಲ, ಆಂಜನೇಯ ಭೋವಿ, ಸಾಬಣ್ಣ ಬೆಳಗಿನವರ್, ಶಿವು ಗೊರೆಬಾಳ, ದುರ್ಗಪ್ಪ ಕಲಂಗೇರ, ಚಂದ್ರು ಕಟ್ಟಿಮನಿ ಸೇರಿದಂತೆ ವಡವಟ್ಟಿ, ಹಣಿಗಿ, ಪಾತಾಪುರ, ಬಾಗಲವಾಡ, ಗೋಲದಿನ್ನಿ, ಹುಸೇನಪುರ, ಸೈದಾಪುರ, ಕಲಂಗೆರಾ, ಕವಿತಾಳ ಭಾಗದ ನೂರಾರು ರೈತರು ಉಪಸ್ಥಿತರಿದ್ದರು.

Previous articleಗಣೇಶೋತ್ಸವ: ಪ್ರತಿಷ್ಠಾಪನೆ, ವಿಸರ್ಜನೆ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ
Next articleಗಣೇಶ ಹಬ್ಬದ ಆಚರಣೆ ಪರಿಸರ ಸ್ನೇಹಿಯಾಗಿರಲಿ