ವೀರ ಹನುಮಾನ ಹಾಗೂ ಈರಣ್ಣ ರುದ್ರಾಕ್ಷಿ
ರಾಯಚೂರು: 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 71 ಮಂದಿ ಸಾಧಕರಿಗೆ ರಾಜ್ಯ ಸರ್ಕಾರ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದ್ದು, ರಾಯಚೂರು ಜಿಲ್ಲೆಯ ಇಬ್ಬರು ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಿಲ್ಲೆಯ ಹಿರಿಯ ಸಾಹಿತಿ ವೀರಹನುಮಾನ್ ಹಾಗೂ ದೇವದುರ್ಗ ತಾಲೂಕಿನ ಮೂಲದ ಜಾನಪದ ಕಲಾವಿದ ಈರಣ್ಣ ರುದ್ರಾಕ್ಷಿ ಅವರು 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದು ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಸಂತಸ ಮೂಡಿಸಿದೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸುಮಾರು 35 ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವೀರಹನುಮಾನ್ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಗೂ ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಯಚೂರು ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆ ಸೇರಿದಂತೆ ಹೈದರಾಬಾದ್ ಕನ್ನಡ ಸಾಹಿತ್ಯ ಸಮ್ಮೇಳನ, ಗಡಿನಾಡ ಕನ್ನಡಿಗರ ಸಮ್ಮೇಳನ, ಹೊರನಾಡು ಕನ್ನಡಿಗರ ಸಮ್ಮೇಳನ ಹಾಗೂ ದಾಸ ಸಾಹಿತ್ಯ ಸಮ್ಮೇಳನಗಳ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕನ್ನಡ ಸಾಹಿತ್ಯಕ್ಕೆ ಹೈಕು ಸಾಹಿತ್ಯ ಪ್ರಕಾರವನ್ನು ಪರಿಚಯಿಸಿದವರಲ್ಲಿ ಪ್ರಮುಖರಾಗಿರುವ ಇವರು, ಕನ್ನಡದಲ್ಲಿ ಹತ್ತು ಹೈಕು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಸಾಹಿತ್ಯಿಕ ಸಾಧನೆಯನ್ನು ಖ್ಯಾತ ಸಾಹಿತಿ ನಾಡೋಜ ಡಾ. ಶಾಂತರಸರು ಪ್ರಶಂಸಿಸಿದ್ದು, ಈ ವಿಶೇಷ ಪ್ರಯತ್ನವನ್ನು ಗುರುತಿಸಿದ್ದಾರೆ. ಒಟ್ಟಾರೆ 48ಕ್ಕೂ ಅಧಿಕ ಕೃತಿಗಳನ್ನು ರಚಿಸಿರುವ ವೀರಹನುಮಾನ್ ಅವರ ಸಾಹಿತ್ಯ ಸೇವೆಗೆ ಇದೀಗ ರಾಜ್ಯಮಟ್ಟದ ಮನ್ನಣೆ ದೊರೆತಿದೆ.
ದೇವದುರ್ಗ ತಾಲೂಕಿನ ಮೂಲದ ಈರಣ್ಣ ರುದ್ರಾಕ್ಷಿ ಅವರು ಹಗಲುವೇಷ ಕಲಾ ಪ್ರಕಾರದಲ್ಲಿ ಗುರುತಿಸಿಕೊಂಡಿರುವ ಜಾನಪದ ಕಲಾವಿದರಾಗಿದ್ದಾರೆ. ಕರ್ನಾಟಕದ ಸಾಂಪ್ರದಾಯಿಕ ಜನಪದ ಕಲಾ ಪ್ರಕಾರಗಳಲ್ಲಿ ಒಂದಾದ ಹಗಲುವೇಷವು ವೇಷಭೂಷಣ, ಅಭಿನಯ, ನಟನೆ ಹಾಗೂ ಜನಪದ ಅಭಿವ್ಯಕ್ತಿಯ ಮೂಲಕ ಜನರನ್ನು ರಂಜಿಸುವ ವಿಶಿಷ್ಟ ಕಲೆಯಾಗಿದೆ. ಗ್ರಾಮೀಣ ಜನಜೀವನ, ಸಾಮಾಜಿಕ ಸಂದೇಶಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಕಲೆಯ ಮೂಲಕ ಜನರಿಗೆ ತಲುಪಿಸುವಲ್ಲಿ ಹಗಲುವೇಷ ಕಲಾವಿದರ ಪಾತ್ರ ಮಹತ್ವದ್ದಾಗಿದೆ. ಇಂತಹ ಸಾಂಪ್ರದಾಯಿಕ ಕಲಾ ಪ್ರಕಾರದಲ್ಲಿ ತೊಡಗಿಸಿಕೊಂಡು ಗುರುತಿಸಿಕೊಂಡಿರುವ ಈರಣ್ಣ ರುದ್ರಾಕ್ಷಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ರಾಯಚೂರು ಜಿಲ್ಲೆಯ ಜಾನಪದ ಕಲಾ ಪರಂಪರೆಗೆ ಸಂದ ಗೌರವವಾಗಿದೆ.
ಇದೇ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಹಿರಿಯ ರಾಜಕಾರಣಿ ಹಾಗೂ ಮಾಜಿ ವಿಧಾನಸಭಾ ಸಭಾಪತಿ ಕಾಗೋಡು ತಿಮ್ಮಪ್ಪ, ಹಿರಿಯ ನಟ ಅಶೋಕ್, ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ, ಫ್ಯಾಷನ್ ಕ್ಷೇತ್ರದ ಪ್ರಸಾದ್ ಬಿದ್ದಪ್ಪ, ದೇಹದಾರ್ಢ್ಯ ಪಟು ಎ.ವಿ. ರವಿ (ಜಿಮ್ ರವಿ), ಮಾಜಿ ಮುಖ್ಯ ಕಾರ್ಯದರ್ಶಿ ತೆರೇಸಾ ಭಟ್ಟಾಚಾರ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಆಯ್ಕೆಯಾಗಿದ್ದಾರೆ.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತಲಾ ಎಂ. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿನ ತುಂಗಭದ್ರ ನದಿ ತೀರದಲ್ಲಿ ಮೌನ ಮಿತ್ರ ಯೋಗ ಸಮಿತಿ ಮಾನ್ವಿ ವತಿಯಿಂದ ನಡೆದ ಮಣ್ಣಿನ…
ರಾಯಚೂರಿನ ನವೋದಯ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ಪ್ರತಿಯೊಬ್ಬರ ಮಾತೃಭಾಷೆಯಾಗಬೇಕು ಎಂದು ಕುಲಸಚಿವ ಡಾ. ಟಿ.…
ಮಂತ್ರಾಲಯ: ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಜಯೇಂದ್ರ ಆರೋಗ್ಯ ಶಾಲೆಯಲ್ಲಿ ನ.1ರಂದು 16…
ಆಗುಂಬೆ ಬಳಿ ಎಕ್ಸ್‌ಯುವಿ ವಾಹನ ಮಣ್ಣಿನ ದಿಬ್ಬಕ್ಕೆ ಡಿಕ್ಕಿಯಾಗಿ ಸಿಂಧನೂರಿನ ಯುವ ವೈದ್ಯ ಡಾ. ಚೇತನಕುಮಾರ (28) ಸ್ಥಳದಲ್ಲೇ ಮೃತಪಟ್ಟಿದ್ದು,…
ಕನ್ನಡ ರಾಜ್ಯೋತ್ಸವದ ಶುಭಾಶಯ ಪೋಸ್ಟರ್‌ಗಳಲ್ಲಿ ಎಐ ಸೃಷ್ಟಿಸಿದ ಕನ್ನಡ ಅಕ್ಷರದೋಷಗಳು ಚರ್ಚೆಗೆ ಗ್ರಾಸವಾಗಿವೆ. ಅಧಿಕಾರಿಗಳು, ಗಣ್ಯರು, ಕನ್ನಡಪರ ಸಂಘಟನೆಗಳೂ ಎಐ…
ರಾಯಚೂರು: ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ…