ರಾಯಚೂರು

ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಆಯುಕ್ತೆ ಫೌಜಿಯಾ ತರನ್ನುಮ್

ರಾಯಚೂರು: ಜಿಲ್ಲೆಯ ಲಿಂಗಸುಗೂರು ಮತ್ತು ದೇವದುರ್ಗ ತಾಲ್ಲೂಕುಗಳಲ್ಲಿ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಗಳಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತೆ ಬಿ. ಫೌಜಿಯಾ ತರನ್ನುಮ್ ಅವರು ಅ.1ರಂದು ಪರಿಶೀಲಿಸಿದರು.
ಮೊದಲಿಗೆ ಲಿಂಗಸುಗೂರು ತಾಲ್ಲೂಕಿನ ಚಿತ್ತಾಪುರ ಗ್ರಾಮಕ್ಕೆ ಭೇಟಿ ನೀಡಿದ ಅವರು, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ವೈಯಕ್ತಿಕ ಗೃಹ ಶೌಚಾಲಯಗಳ ಕಾಮಗಾರಿಯನ್ನು ವೀಕ್ಷಿಸಿದರು. ಕಾಮಗಾರಿಯ ಪ್ರಗತಿ ಹಾಗೂ ಗುಣಮಟ್ಟದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ನೀರಲಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಭಾವಿ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಜಲಧಾರೆ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿಯನ್ನು ಪರಿಶೀಲಿಸಿದರು. ಕಾಮಗಾರಿಯನ್ನು ನಿಗದಿತ ಗುಣಮಟ್ಟದೊಂದಿಗೆ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಗುರುಗುಂಟ ಗ್ರಾಮಕ್ಕೆ ಭೇಟಿ ನೀಡಿದ ಆಯುಕ್ತೆ, ಘನ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಮಲತ್ಯಾಜ್ಯ ವಿಲೇವಾರಿ ಘಟಕಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ನೀಡಿದರು.
ಘನ ತ್ಯಾಜ್ಯ ನಿರ್ವಹಣಾ ಕಾರ್ಯದಲ್ಲಿ ತೊಡಗಿರುವ ಸ್ವಸಹಾಯ ಸಂಘಗಳ ಮಹಿಳೆಯರೊಂದಿಗೆ ಚರ್ಚಿಸಿದ ಅವರು, ಅವರ ಕೆಲಸದ ಪರಿಸ್ಥಿತಿ, ಕಲ್ಯಾಣ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ತ್ಯಾಜ್ಯ ಸಂಗ್ರಹಣೆ, ವಿಂಗಡಣೆ ಮತ್ತು ವಿಲೇವಾರಿ ಸಂದರ್ಭದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದರು.
ಅಲ್ಲದೆ, ತ್ಯಾಜ್ಯ ಸಂಗ್ರಹಣಾ ವಾಹನದಲ್ಲಿಯೇ ಕುಳಿತು ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ವ್ಯವಸ್ಥೆಯನ್ನು ಖುದ್ದಾಗಿ ವೀಕ್ಷಿಸಿದರು. ವಾಹನದ ನಿರ್ವಹಣೆ ಹಾಗೂ ಕಾರ್ಯನಿರ್ವಹಣೆಯ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆದರು.


ಜಲ ಜೀವನ್ ಮಿಷನ್ ಕಾಮಗಾರಿಗಳ ಪರಿಶೀಲನೆ
ದೇವದುರ್ಗ ತಾಲ್ಲೂಕಿನ ಜೇರಬಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮದಾಳ ಗ್ರಾಮಕ್ಕೆ ಭೇಟಿ ನೀಡಿದ ಅವರು, ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆ, ಕಾಮಗಾರಿಗಳ ಪ್ರಗತಿ ಹಾಗೂ ಯೋಜನೆಯ ಅನುಷ್ಠಾನದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾಮಗಾರಿಗಳ ಗುಣಮಟ್ಟವನ್ನು ಕಾಪಾಡುವುದರೊಂದಿಗೆ ಗ್ರಾಮಸ್ಥರಿಗೆ ಸಮರ್ಪಕ ಹಾಗೂ ನಿರಂತರವಾಗಿ ಕುಡಿಯುವ ನೀರು ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ, ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಅಗತ್ಯತೆಗಳ ಕುರಿತು ಮಾಹಿತಿ ಪಡೆದರು.
ಶಕ್ತಿ ಕೇಂದ್ರದ ಕಾರ್ಯಚಟುವಟಿಕೆ ಪರಿಶೀಲನೆ
ಮಸರಕಲ್ ಗ್ರಾಮದಲ್ಲಿರುವ ಶಕ್ತಿ ಕೇಂದ್ರಕ್ಕೆ ಭೇಟಿ ನೀಡಿದ ಆಯುಕ್ತೆ, ಕೇಂದ್ರದ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು. ಕೇಂದ್ರದಲ್ಲಿ ಉತ್ಪಾದಿಸಲಾಗುತ್ತಿರುವ ರಾಗಿ, ಗೋಧಿ, ಹೆಸರುಕಾಳು ಹಾಗೂ ನ್ಯೂಟ್ರಿಮಿಕ್ಸ್ ಸೇರಿದಂತೆ ವಿವಿಧ ಪೌಷ್ಟಿಕ ಆಹಾರ ಪದಾರ್ಥಗಳ ತಯಾರಿಕೆ, ಗುಣಮಟ್ಟ ಮತ್ತು ವಿತರಣಾ ವ್ಯವಸ್ಥೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಪೌಷ್ಟಿಕ ಆಹಾರ ಪದಾರ್ಥಗಳ ಸರಬರಾಜು, ಉತ್ಪಾದನಾ ಪ್ರಮಾಣ ಹಾಗೂ ವಿತರಣೆಯ ಪ್ರಗತಿಯನ್ನು ಪರಿಶೀಲಿಸಿದರು. ಕೇಂದ್ರದಲ್ಲಿರುವ ವಿವಿಧ ಯಂತ್ರೋಪಕರಣಗಳ ಕಾರ್ಯನಿರ್ವಹಣೆಯನ್ನು ವೀಕ್ಷಿಸಿ, ಅವುಗಳ ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಪೌಷ್ಟಿಕ ಆಹಾರ ಪದಾರ್ಥಗಳ ಗುಣಮಟ್ಟವನ್ನು ಕಾಪಾಡುವುದರೊಂದಿಗೆ ಅಗತ್ಯವಿರುವ ಗ್ರಾಮಗಳಿಗೆ ಸಮರ್ಪಕವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಅಕ್ಕ ಕೆಫೆಗೆ ಭೇಟಿ
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಯೋಜನೆಯಡಿ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸ್ಥಾಪಿಸಲಾಗಿರುವ ಅಕ್ಕ ಕೆಫೆಗೆ ಆಯುಕ್ತೆ ಭೇಟಿ ನೀಡಿದರು.
ಅಕ್ಕ ಕೆಫೆಯನ್ನು ನಿರ್ವಹಿಸುತ್ತಿರುವ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರೊಂದಿಗೆ ಚರ್ಚಿಸಿ, ಗ್ರಾಹಕರಿಗೆ ಶುಚಿ, ರುಚಿಕರ ಹಾಗೂ ಗುಣಮಟ್ಟದ ಆಹಾರವನ್ನು ಒದಗಿಸುವಂತೆ ತಿಳಿಸಿದರು. ಅಕ್ಕ ಕೆಫೆಯ ಕಾರ್ಯಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದರು.
ಪ್ರಗತಿ ಪರಿಶೀಲನಾ ಸಭೆ
ನಂತರ ರಾಯಚೂರು ಜಿಲ್ಲಾ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ವಿವಿಧ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಗಳ ಪ್ರಗತಿ, ಯೋಜನೆಗಳ ಅನುಷ್ಠಾನ ಹಾಗೂ ಬಾಕಿ ಇರುವ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ, ಯೋಜನಾ ನಿರ್ದೇಶಕ ಶರಣಬಸವರಾಜ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ, ಕಾರ್ಯಪಾಲಕ ಅಭಿಯಂತರ ದೊರೆಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

projectededore

Recent Posts

ಮಾದಕ ವ್ಯಸನ ನಿರ್ಮೂಲನೆ ಇಂದಿನ ಅಗತ್ಯ: ಸಿ.ವಿ. ಚಂದ್ರಶೇಖರ್

ಕೊಪ್ಪಳದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾದಕ ವ್ಯಸನ ನಿರ್ಮೂಲನೆ, ಯುವಜನರಲ್ಲಿ ಜಾಗೃತಿ ಮತ್ತು ಅಕ್ರಮ…

12 hours ago

ರಾಯಚೂರು ನ್ಯಾಯಾಲಯದಲ್ಲಿ ಗಾಂಧೀಜಿ ಜಯಂತಿ ಆಚರಣೆ

ರಾಯಚೂರು: ರಾಯಚೂರು ನ್ಯಾಯವಾದಿಗಳ ಸಂಘ ಹಾಗೂ ನ್ಯಾಯಾಂಗ ಇಲಾಖೆಯ ವತಿಯಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧೀಜಿ ಜಯಂತಿಯನ್ನು ಆಚರಿಸಲಾಯಿತು.…

14 hours ago

ಕೃವಿವಿಯಲ್ಲಿ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ…

20 hours ago

ಸ್ವಚ್ಛತೆ ಜೀವನದ ಅವಿಭಾಜ್ಯ ಅಂಗ: ಜಿ. ಮಲ್ಲಿಕಾರ್ಜುನ್

ರಾಯಚೂರು: ಸ್ವಚ್ಛತೆ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಬೇಕು. ಸುತ್ತಲಿನ ಪರಿಸರ ಶುಚಿತ್ವದಿಂದ ಕೂಡಿದ್ದರೆ ಮಾತ್ರ ಆರೋಗ್ಯಕರ ಜೀವನ ನಡೆಸಲು ಸಾಧ್ಯ…

21 hours ago

‘ಪ್ರೇರಣಾ’ – ವಿ. ಎಸ್. ಕಾಂತನವರ ಹಿಂದಿ ಕಾವ್ಯ ಸುಮಗುಚ್ಛ

ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಛಂದೋಬದ್ಧ ಪದ್ಯಗಳನ್ನು ರಚಿಸಿದ ಶಬ್ದ ಗಾರುಡಿಗ ಗುರುಶ್ರೀ ವಿ.ಎಸ್. ಕಾಂತನವರ ಅವರ ಸಾಹಿತ್ಯ…

3 weeks ago

ಶಾಸಕ ಬಸನಗೌಡ ದದ್ದಲ್‌ರಿಂದ ವಿಶ್ವವಿದ್ಯಾಲಯದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ರಾಯಚೂರು: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ವೇಳೆ ಅಧಿಕಾರಿಗಳೊಂದಿಗೆ ವಿಶ್ವವಿದ್ಯಾಲಯದಲ್ಲಿ ಪ್ರಗತಿಯಲ್ಲಿರುವ ವಿವಿಧ ಪ್ರಮುಖ ಅಭಿವೃದ್ಧಿ…

3 weeks ago