ರಾಯಚೂರು: ಲಿಂಗಸ್ಗೂರಿನಿಂದ ಬಳ್ಳಾರಿವರೆಗೆ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ಪ್ರೇರಿತವಾಗಿದ್ದು, ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜಕೀಯ ಮೈಲೇಜ್ ಪಡೆಯುವ ಉದ್ದೇಶದಿಂದ ಈ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ರಾಜ್ಯ ವಕ್ತಾರ ರಝಾಕ್ ಉಸ್ತಾದ್ ಆರೋಪಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ₹184 ಕೋಟಿ ಪ್ರಕರಣದಲ್ಲಿ ₹179 ಕೋಟಿ ಹಣ ಪ್ರಕರಣ ದಾಖಲಾಗುವ ಸಂದರ್ಭದಲ್ಲಿಯೇ ಸರ್ಕಾರಕ್ಕೆ ವಾಪಸ್ ಬಂದಿದೆ. ಪ್ರಕರಣ ಸದ್ಯ ತನಿಖೆಯ ಹಂತದಲ್ಲಿದ್ದು, ಯಾರು ತಪ್ಪು ಮಾಡಿದ್ದಾರೆ ಎಂಬುದು ತನಿಖೆಯಿಂದ ಹೊರಬರಲಿದೆ. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಬ್ಯಾಂಕ್ ಕೂಡ ಭಾಗಿಯಾಗಿದ್ದು, ಸಂಬಂಧಪಟ್ಟ ಸಚಿವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಹೀಗಿರುವಾಗ ಬಿಜೆಪಿ ಯಾವ ಪುರುಷಾರ್ಥಕ್ಕಾಗಿ ಪಾದಯಾತ್ರೆ ನಡೆಸುತ್ತಿದೆ ಎಂದು ರಝಾಕ್ ಉಸ್ತಾದ್ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF)ಯಿಂದ ಅನುದಾನ ಬಿಡುಗಡೆ ಮಾಡಿಸುವಂತೆ ಒತ್ತಾಯಿಸಿ ಬಿಜೆಪಿ ಹೋರಾಟ ನಡೆಸಲಿ. ಬಿಜೆಪಿ ನಿಜವಾಗಿಯೂ ಜನಪರವಾಗಿದ್ದರೆ ಬರಗಾಲ ಪರಿಹಾರ ವಿತರಣೆಗೆ ಪಾದಯಾತ್ರೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ಕಳೆದ ತಿಂಗಳು ಬರಗಾಲ ವೀಕ್ಷಣೆಗೆ ಬಂದಿತ್ತು. ಆ ವರದಿ ಏನಾಯಿತು? ಅಧಿವೇಶನ ನಡೆಯುವ ಸಂದರ್ಭದಲ್ಲಿಯೂ ಹೋರಾಟ ನಡೆಸಿ ಬರಗಾಲದ ವಿಷಯ ಚರ್ಚೆಗೆ ಬಾರದಂತೆ ಮಾಡಿದ್ದೀರಿ. ಬರಗಾಲ ವೀಕ್ಷಣೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರಕ್ಕೆ ಒತ್ತಾಯಿಸುವ ಕೆಲಸ ಮಾಡಬೇಕಿತ್ತು. ಅದನ್ನು ಬಿಟ್ಟು ಪಾದಯಾತ್ರೆ ನಡೆಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ರಾಯಚೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಗಾಲದಿಂದ ತತ್ತರಿಸಿವೆ. ಎಡದಂಡೆ ಕಾಲುವೆಯ ನೀರು ಕೊನೆಯ ಭಾಗದ ರೈತರಿಗೆ ತಲುಪುತ್ತಿಲ್ಲ ಎಂದು ರೈತರು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ NDRF ಕಠಿಣ ನಿಯಮಗಳ ಕಾರಣ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬರಗಾಲ ಪಟ್ಟಿಗೆ ಸೇರ್ಪಡೆಯಾಗಿಲ್ಲ ಎಂದು ರೈತರು ಹೋರಾಟ ಮಾಡುತ್ತಿದ್ದಾರೆ. ಇದರೊಂದಿಗೆ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ ಎಂದು ತಿಳಿಸಿದ್ದಾರೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಜನಪರವಾಗಿ ಮಾತನಾಡುವುದು ಸೂಕ್ತ. ಜನರು ಸಂಕಷ್ಟದಲ್ಲಿರುವಾಗ ರಾಜಕೀಯ ಮೈಲೇಜ್ ಪಡೆಯಲು ನಡೆಸುವ ಪಾದಯಾತ್ರೆ ಫಲ ನೀಡುವುದಿಲ್ಲ. ಬಿಜೆಪಿ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ರಝಾಕ್ ಉಸ್ತಾದ್ ಅಭಿಪ್ರಾಯಪಟ್ಟಿದ್ದಾರೆ.








