ಕಾಮಗಾರಿ ಗುಣಮಟ್ಟ ಕಾಪಾಡಿ, ತ್ವರಿತವಾಗಿ ಪೂರ್ಣಗೊಳಿಸಲು NHAI ಅಧಿಕಾರಿಗಳಿಗೆ ಸೂಚನೆ
ಯಾದಗಿರಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಭಾರತ್‌ಮಾಲಾ ಯೋಜನೆಯಡಿ ನಿರ್ಮಾಣವಾಗುತ್ತಿರುವ ಚೆನ್ನೈ–ಸೂರತ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪ್ಯಾಕೇಜ್–3 ಅನ್ನು ರಾಯಚೂರು–ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರ ನಾಯಕ ಅವರು ಇಂದು ವೀಕ್ಷಿಸಿದರು. ಎಡೆದೊರೆ ನ್ಯೂಸ್
ಪ್ಯಾಕೇಜ್–3ರ ವ್ಯಾಪ್ತಿಯಲ್ಲಿ ಬಸಂತಪುರದಿಂದ ಶಹಾಪುರ ತಾಲೂಕಿನ ಸಿರವಾಳ ಗ್ರಾಮವರೆಗೆ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಸಂಸದರು, ಕಾಮಗಾರಿಯ ಗುಣಮಟ್ಟ ಹಾಗೂ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಹೆದ್ದಾರಿ ನಿರ್ಮಾಣದಿಂದ ರೈತರು ಹಾಗೂ ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯವಿರುವ ಕಡೆಗಳಲ್ಲಿ ಅಂಡರ್‌ಪಾಸ್‌ಗಳನ್ನು ನಿರ್ಮಿಸಬೇಕು. ರೈತರು ತಮ್ಮ ಜಮೀನುಗಳಿಗೆ ಸುಗಮವಾಗಿ ತೆರಳಲು ಅನುಕೂಲವಾಗುವಂತೆ ಸರ್ವೀಸ್ ರಸ್ತೆಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅದೇ ರೀತಿ, ಗ್ರಾಮಗಳ ಪ್ರವೇಶ–ನಿರ್ಗಮನ, ಅಂಡರ್‌ಪಾಸ್, ಸರ್ವೀಸ್ ರಸ್ತೆ ಹಾಗೂ ತಿರುವುಗಳಿರುವ ಸ್ಥಳಗಳಲ್ಲಿ ವಾಹನ ಸವಾರರಿಗೆ ಸ್ಪಷ್ಟವಾಗಿ ಮಾಹಿತಿ ದೊರೆಯುವಂತೆ ಸೂಚನಾ ಫಲಕಗಳನ್ನು ಅಳವಡಿಸುವುದು ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ರೈತರು ತಮ್ಮ ಜಮೀನುಗಳಿಗೆ ತೆರಳುವ ದಾರಿಗಳು ಬಂದ್ ಆಗದಂತೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸಬೇಕು. ಮಳೆಗಾಲದಲ್ಲಿ ನೀರು ನಿಲ್ಲದಂತೆ ಚರಂಡಿ ಹಾಗೂ ನೀರು ಹರಿದುಹೋಗುವ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ಮಿಸಬೇಕು ಎಂದು ಸೂಚಿಸಿದರು.
ಕಾಮಗಾರಿಯಲ್ಲಿ ಬಳಸುವ ಸಾಮಗ್ರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ನಿಗದಿತ ಮಾನದಂಡಗಳಂತೆ ಕಾಮಗಾರಿ ಕೈಗೊಂಡು ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದ ಜಿ. ಕುಮಾರ ನಾಯಕ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೆದ್ದಾರಿ ಕಾಮಗಾರಿಯಿಂದ ಸ್ಥಳೀಯ ಜನರು ಹಾಗೂ ರೈತರಿಗೆ ಉಂಟಾಗಬಹುದಾದ ಸಮಸ್ಯೆಗಳನ್ನು ಅಧಿಕಾರಿಗಳು ಸ್ಥಳದಲ್ಲಿಯೇ ಪರಿಶೀಲಿಸಿ, ಅವುಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಕಾಮಗಾರಿಯ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸುವುದರ ಜೊತೆಗೆ ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ NHAI ಯೋಜನಾ ನಿರ್ದೇಶಕರು, ಪ್ಲಾನಿಂಗ್ ಮ್ಯಾನೇಜರ್, ಸಂಬಂಧಪಟ್ಟ ಅಧಿಕಾರಿಗಳು, ಕಾಮಗಾರಿ ಗುತ್ತಿಗೆ ಸಂಸ್ಥೆಯ ಪ್ರತಿನಿಧಿಗಳು, ಸ್ಥಳೀಯ ಮುಖಂಡರು, ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.








