ರಾಯಚೂರು: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಬಳಿಕ ರಾಯಚೂರಿನ ಓಂ ಸಾಯಿ ಧ್ಯಾನ ಮಂದಿರಕ್ಕೆ ಭೇಟಿ ನೀಡಿ ನಟ ಆದಿತ್ಯ ಶಶಿಕುಮಾರ್, ನಿರ್ಮಾಪಕ ಅಖಿಲೇಶ್ ಸೇರಿದಂತೆ ಚಿತ್ರತಂಡದ ಸದಸ್ಯರು ಶ್ರೀ ಶಿರಡಿ ಸಾಯಿಬಾಬಾ ಅವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ನವೆಂಬರ್ 13ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ‘ರಾಶಿ’ ಚಿತ್ರದ ಯಶಸ್ಸಿಗಾಗಿ ಚಿತ್ರತಂಡ ನವೆಂಬರ್ 4ರಂದು ಮಂದಿರಕ್ಕೆ ಆಗಮಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ನಟ ಆದಿತ್ಯ ಶಶಿಕುಮಾರ್, ತಮ್ಮ ಕುಟುಂಬಕ್ಕೆ ಶಿರಡಿ ಸಾಯಿಬಾಬಾ ಅವರ ಮೇಲೆ ಅಪಾರ ಭಕ್ತಿ ಮತ್ತು ನಂಬಿಕೆ ಇದೆ. ತಮ್ಮ ಮನೆಯ ಹೆಸರನ್ನು ತಂದೆ, ಹಿರಿಯ ನಟ ಶಶಿಕುಮಾರ್ ಅವರು ದ್ವಾರಕಾಮಾಯಿ ಎಂದು ನಾಮಕರಣ ಮಾಡಿದ್ದಾರೆ. ತಂದೆಯವರು ಸದಾ ‘ಓಂ ಸಾಯಿರಾಂ’ ಎಂದು ಜಪಿಸುತ್ತಾರೆ ಎಂದು ತಿಳಿಸಿದರು.

ರಾಯಚೂರಿನ ಓಂ ಸಾಯಿ ಧ್ಯಾನ ಮಂದಿರದಲ್ಲಿ ಸಾಯಿಬಾಬಾ ಅವರ ದರ್ಶನ ಪಡೆದಾಗ ಶಿರಡಿಯ ದ್ವಾರಕಾಮಾಯಿಯಲ್ಲಿ ದೊರೆಯುವಂತಹ ಮನಃಶಾಂತಿ ಮತ್ತು ಆಧ್ಯಾತ್ಮಿಕ ಅನುಭವ ದೊರೆಯಿತು. ಬಾಬಾ ಅವರೇ ತಮ್ಮನ್ನು ಇಲ್ಲಿಗೆ ಕರೆಸಿಕೊಂಡಿದ್ದಾರೆ ಎಂಬ ಭಾವನೆ ಮೂಡಿದೆ. ರಾಯರು ಹಾಗೂ ಸಾಯಿಬಾಬಾ ಅವರ ಆಶೀರ್ವಾದದಿಂದ ‘ರಾಶಿ’ ಚಿತ್ರ ಯಶಸ್ಸು ಕಾಣಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.

ಮಂದಿರದ ಸಂಸ್ಥಾಪಕ ಸಾಯಿಕಿರಣ್ ಆದೋನಿ ಗುರುಜಿ ಮಾತನಾಡಿ, ಹಿರಿಯ ನಟ ಶಶಿಕುಮಾರ್ ಅವರ ಪುತ್ರ ಆದಿತ್ಯ ಅವರು ಕೂಡ ಪರಿಶ್ರಮ ಮತ್ತು ಪ್ರತಿಭೆಯಿಂದ ಚಿತ್ರರಂಗದಲ್ಲಿ ಉತ್ತಮ ಹೆಸರು ಗಳಿಸಲಿ. ಗುರುಗಳ ಹಾಗೂ ಸಾಯಿಬಾಬಾ ಅವರ ಆಶೀರ್ವಾದದಿಂದ ಅವರ ಕಲಾ ಜೀವನ ಉಜ್ವಲವಾಗಲಿ ಎಂದು ಹಾರೈಸಿದರು. ನಿರ್ಮಾಪಕ ಅಖಿಲೇಶ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ನಟ ಆದಿತ್ಯ ಶಶಿಕುಮಾರ್ ಅವರ ಹೆಸರಿನಲ್ಲಿ ವಿಶೇಷ ಅರ್ಚನೆ ಹಾಗೂ ಪೂಜೆ ನೆರವೇರಿಸಿ ಧೂಪ, ದೀಪ, ಮಂಗಳಾರತಿ ಸಲ್ಲಿಸಲಾಯಿತು. ಬಳಿಕ ಚಿತ್ರತಂಡಕ್ಕೆ ಶನಿದೇವರ ಹಾಗೂ ದ್ವಾರಕಾಮಾಯಿಯ ದರ್ಶನ ಮಾಡಿಸಲಾಯಿತು.

ಪುನೀತ್ ರಾಜ್‌ಕುಮಾರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಾದಿಕ್ ಖಾನ್ ಮಾತನಾಡಿ, ‘ರಾಶಿ’ ಚಿತ್ರದ ಪ್ರಚಾರ ಹಾಗೂ ಪ್ರಸಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸುದರ್ಶನ್ ರೆಡ್ಡಿ, ರಾಜೇಶ್ ಮಡಿವಾಳ್, ಉಸ್ಮಾನ್, ಉಮಾಕಾಂತ್, ಮುನಿಸ್ವಾಮಿ, ಪರಮೇಶ್, ನವೀನ್, ಶ್ರೀಶೈಲ, ಬಸವನಗೌಡ, ದಂಡಪ್ಪ ಬಿರಾದಾರ ಸೇರಿ ಹಲವಾರು ಸಾಯಿಭಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Previous articleಮಂತ್ರಾಲಯದಲ್ಲಿ ರಾಘವ ಸರೋವರ ಯೋಜನೆಗೆ ಭೂಮಿಪೂಜೆ
Next article​ಡಾ.ಬಿ.ಆರ್. ಅಂಬೇಡ್ಕರ್ ಅವರ ನಿರಂತರ ಓದಿನ ಹಾದಿಯೇ ವಿದ್ಯಾರ್ಥಿಗಳಿಗೆ ಸ್ಪೂರ್ತಿ: ಅಬ್ರಾಹಂ