25 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣಕ್ಕೆ ಯೋಜನೆ – ₹25 ಲಕ್ಷ ದೇಣಿಗೆ ನೀಡಿದ ಬೆಂಗಳೂರಿನ ಮದನ್ ಪಾಟೀಲ್

ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ ದಿವ್ಯಾನುಗ್ರಹ ಹಾಗೂ ಮಂತ್ರಾಲಯದ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಮಾರ್ಗದರ್ಶನದಲ್ಲಿ ಮಹತ್ವಾಕಾಂಕ್ಷೆಯ ರಾಘವ ಸರೋವರ ಯೋಜನೆಗೆ ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು.

ಮಂತ್ರಾಲಯದ ಪವಿತ್ರ ಪರಿಸರದಲ್ಲಿ ಸುಮಾರು 25 ಎಕರೆ ಪ್ರದೇಶದಲ್ಲಿ ಈ ಯೋಜನೆ ರೂಪಿಸಲಾಗಿದ್ದು, ಸುಂದರ ಕೃತಕ ಸರೋವರ ನಿರ್ಮಿಸುವುದರ ಜೊತೆಗೆ ಸುತ್ತಮುತ್ತ ಹಸಿರು ಪರಿಸರ ಬೆಳೆಸುವುದು, ಪ್ರಕೃತಿ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಸಾರ್ವಜನಿಕರ ಅನುಕೂಲಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ಕಾರ್ಯಕ್ರಮದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಉಪಸ್ಥಿತರಿದ್ದು, ಯೋಜನೆಗೆ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಮದನ್ ಪಾಟೀಲ್ ಅವರು ರಾಘವ ಸರೋವರ ಯೋಜನೆಗೆ 25 ಲಕ್ಷ ರೂ.ದೇಣಿಗೆ ನೀಡುವ ಮೂಲಕ ಯೋಜನೆಗೆ ಆರ್ಥಿಕ ನೆರವು ನೀಡಿದರು. ಡಾ. ಸಿ.ಎಸ್. ಮಂಜುನಾಥ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹಲವು ಗಣ್ಯರು, ಭಕ್ತರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಘವ ಸರೋವರ ಯೋಜನೆಯು ಮಂತ್ರಾಲಯದ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಭಕ್ತರು ಮತ್ತು ಪ್ರವಾಸಿಗರಿಗೆ ಶಾಂತವಾದ ನೈಸರ್ಗಿಕ ವಾತಾವರಣ ಕಲ್ಪಿಸುವ ಮಹತ್ವದ ಯೋಜನೆಯಾಗಿ ರೂಪುಗೊಳ್ಳಲಿದೆ.

Previous articleಗ್ರಾಮೀಣ ಜನರಿಗೆ ನಿರಂತರ ಆರೋಗ್ಯ ಸೇವೆ: ಭವಿಷ್ಯ ಭಾರತ್, VST ಸಂಜೀವನಿ ಕಾರ್ಯ ಶ್ಲಾಘನೆ
Next articleರಾಯಚೂರಿನ ಓಂ ಸಾಯಿ ಧ್ಯಾನ ಮಂದಿರಕ್ಕೆ ‘ರಾಶಿ’ ಚಿತ್ರತಂಡ ಭೇಟಿ