ರಾಯಚೂರು: ಬಾಲ್ಯದ ಕಷ್ಟಗಳು, ಕುಟುಂಬದ ಸಂಕಷ್ಟಗಳು ಹಾಗೂ ಸಾಮಾಜಿಕ ಸವಾಲುಗಳ ನಡುವೆಯೂ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರಾಮಣ್ಣ ಹವಳೆ ಅವರ ಬದುಕು ಇಂದಿನ ತಲೆಮಾರಿಗೆ ಸ್ಫೂರ್ತಿಯಾಗಿದೆ ಎಂದು ಗದಗ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಮರೇಶ ಯತಗಲ್ ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ನಡೆದ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಬದುಕು ಮತ್ತು ಬರಹ ಕುರಿತು ಅವರು ಉಪನ್ಯಾಸ ನೀಡಿದರು.
ಕಿನ್ನಾಳ ಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರಾಮಣ್ಣ ಹವಳೆ ಅವರು ಬಾಲ್ಯದಲ್ಲಿಯೇ ಬಡತನ ಮತ್ತು ಕೌಟುಂಬಿಕ ಸಂಕಷ್ಟಗಳನ್ನು ಎದುರಿಸಿದರು. ಆದರೆ ಆ ಕಹಿ ಅನುಭವಗಳನ್ನು ತಮ್ಮ ಬದುಕಿನ ಮಿತಿಯಾಗಿಸಿಕೊಳ್ಳದೆ, ಸಮಾಜಕ್ಕೆ ಜ್ಞಾನ ಮತ್ತು ಅನುಭವದ ಸಿಹಿ ಹಂಚಿದ ವ್ಯಕ್ತಿಯಾಗಿ ಬೆಳೆದರು. ಅವರ ವ್ಯಕ್ತಿತ್ವದಲ್ಲಿ ಸ್ವಾಭಿಮಾನ, ಪರಿಶ್ರಮ ಮತ್ತು ಮಾನವೀಯ ಮೌಲ್ಯಗಳು ಹಾಸುಹೊಕ್ಕಾಗಿವೆ ಎಂದು ಹೇಳಿದರು.
ಹವಳೆ ಅವರ ಬದುಕಿನ ಮೇಲೆ ತಾಯಿ ಪಾರ್ವತಮ್ಮ ಅವರ ವ್ಯಕ್ತಿತ್ವ ದೊಡ್ಡ ಪ್ರಭಾವ ಬೀರಿದೆ. ಮದುವೆಯಾದ ಬಳಿಕ ಗಂಡನ ಮನೆಯ ಬಡತನ ಕಂಡು ತಾಯಿ ಮನೆಗೆ ಮರಳುವಂತೆ ಒತ್ತಾಯ ಬಂದರೂ, ಪತಿಯ ಮನೆಯನ್ನು ತೊರೆಯದೆ ಅಲ್ಲಿಯೇ ಬದುಕಲು ನಿರ್ಧರಿಸಿದ ಪಾರ್ವತಮ್ಮ ಅವರ ಸ್ವಾಭಿಮಾನ ಗಮನಾರ್ಹ. ತಾಯಿಯ ಈ ಗಟ್ಟಿತನವೇ ಮಗನ ವ್ಯಕ್ತಿತ್ವದಲ್ಲಿಯೂ ಬೆಳೆದುಬಂದಿದೆ ಎಂದು ವಿವರಿಸಿದರು.
ಒಂಬತ್ತು ಮಕ್ಕಳ ಕುಟುಂಬದಲ್ಲಿ ಎಂಟನೇ ಮಗನಾಗಿದ್ದ ರಾಮಣ್ಣ ಹವಳೆ ಅವರು ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ತಂದೆಯ ಕೊನೆಯ ಕ್ಷಣಗಳಲ್ಲಿ ಅವರಿಗಾಗಿ ಮದ್ಯ ತಂದುಕೊಟ್ಟ ಘಟನೆಯನ್ನು ನೆನಪಿಸಿಕೊಂಡು, ಅದೇ ತಂದೆಗೆ ತಾನು ಸಲ್ಲಿಸಿದ ಮೊದಲ ಮತ್ತು ಕೊನೆಯ ಸೇವೆ ಎಂದು ಹೇಳಿರುವುದು ಅವರ ಬಾಲ್ಯದ ನೋವಿನ ಅನುಭವಕ್ಕೆ ಸಾಕ್ಷಿಯಾಗಿದೆ ಎಂದರು.
ಶಿಕ್ಷಕ ವೃತ್ತಿಯನ್ನು ಕೇವಲ ಜೀವನೋಪಾಯದ ಮಾರ್ಗವಾಗಿ ನೋಡದೆ, ಅದನ್ನೇ ಸಮಾಜ ನಿರ್ಮಾಣದ ಹೊಣೆಗಾರಿಕೆಯಾಗಿ ಸ್ವೀಕರಿಸಿದವರು ಹವಳೆ. ಬರೋಬ್ಬರಿ 58 ವರ್ಷಗಳ ಕಾಲ ಶಿಕ್ಷಕರಾಗಿ, ಉಪನ್ಯಾಸಕರಾಗಿ ಮತ್ತು ನವೋದಯ ಶಾಲೆಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗುರುತಿಸಿ, ಅವರ ಕಲಿಕೆಯ ಮಟ್ಟಕ್ಕೆ ತಕ್ಕಂತೆ ಬೋಧನೆ ಮಾಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ಸಂಪಾದಿಸಿದ್ದಾರೆ ಎಂದು ಹೇಳಿದರು.
ನಿರಂತರ ಓದು ಮತ್ತು ಅಧ್ಯಯನ ಅವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇಂದಿಗೂ ಪ್ರತಿದಿನ ಎಂಟರಿಂದ ಹತ್ತು ಪುಟಗಳನ್ನು ಓದುವ ಹವಳೆ ಅವರ ಜ್ಞಾನಪಿಪಾಸೆ ಯುವ ಶಿಕ್ಷಕರು ಹಾಗೂ ಸಂಶೋಧಕರಿಗೆ ಮಾದರಿಯಾಗಿದೆ. ‘Who dares to teach, shall never cease to learn’ ಎಂಬ ಮಾತಿನಂತೆ ಬೋಧಿಸುವವರು ಕಲಿಯುವುದನ್ನು ಎಂದಿಗೂ ನಿಲ್ಲಿಸಬಾರದು ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.
ಮಗುವನ್ನು ಒಂದು ಪುಸ್ತಕದಂತೆ ಕಾಣಬೇಕು. ಅದರ ಪ್ರತಿಯೊಂದು ಪುಟವನ್ನು ಓದಿದಾಗ ಮಾತ್ರ ಮಗುವಿನ ಮನಸ್ಥಿತಿ, ಸಾಮರ್ಥ್ಯ ಮತ್ತು ಕಲಿಕೆಯ ಅಗತ್ಯ ಅರ್ಥವಾಗುತ್ತದೆ ಎಂಬುದು ಅವರ ಬೋಧನಾ ದೃಷ್ಟಿಕೋನವಾಗಿದೆ. ಶಿಕ್ಷಣವು ಮಕ್ಕಳನ್ನು ಕೇವಲ ಉದ್ಯೋಗಕ್ಕೆ ಸಿದ್ಧಗೊಳಿಸದೆ, ಜಾತಿ, ಅಹಂಕಾರ, ಅಧಿಕಾರ ಮತ್ತು ಪ್ರಾದೇಶಿಕ ಭೇದಗಳನ್ನು ಮೀರಿ ಮನುಷ್ಯರನ್ನಾಗಿ ರೂಪಿಸಬೇಕು ಎಂಬುದು ಅವರ ಆಶಯವಾಗಿದೆ ಎಂದು ತಿಳಿಸಿದರು.
ಶಿಕ್ಷಕರ ಸ್ಥಾನಕ್ಕೆ ಗೌರವ ತಂದುಕೊಡುವುದು ಅವರ ನಡವಳಿಕೆ ಮತ್ತು ಕಾರ್ಯವೇ ಹೊರತು ಹುದ್ದೆಯಲ್ಲ. ಕೆಲವರು ಹುದ್ದೆಯಿಂದ ಗೌರವ ಪಡೆಯುತ್ತಾರೆ, ಇನ್ನು ಕೆಲವರು ತಮ್ಮ ಕೆಲಸದ ಮೂಲಕ ಹುದ್ದೆಯ ಗೌರವವನ್ನೇ ಹೆಚ್ಚಿಸುತ್ತಾರೆ. ರಾಮಣ್ಣ ಹವಳೆ ಅವರು ಎರಡನೇ ವರ್ಗಕ್ಕೆ ಸೇರಿದವರು. ಶಿಕ್ಷಕ ವೃತ್ತಿಯ ಘನತೆಯನ್ನು ತಮ್ಮ ಸೇವೆಯ ಮೂಲಕ ಎತ್ತಿಹಿಡಿದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೋಧನೆಯಷ್ಟೇ ಅಲ್ಲದೆ ಸಾಹಿತ್ಯ ಮತ್ತು ಸಂಶೋಧನೆಯಲ್ಲಿಯೂ ಹವಳೆ ಅವರ ಕೊಡುಗೆ ಮಹತ್ವದ್ದಾಗಿದೆ. ಶಿಕ್ಷಣ, ಇತಿಹಾಸ, ಜೀವನ ಚರಿತ್ರೆ, ನಾಟಕ ಹಾಗೂ ಸಂಶೋಧನಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದು, ಅವುಗಳಲ್ಲಿ ಹಲವು ಸಂಶೋಧನೆಗೆ ಹೊಸ ದಿಕ್ಕು ತೋರಿಸುವ ವಿಚಾರಗಳನ್ನು ಒಳಗೊಂಡಿವೆ ಎಂದರು.
ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ದಾಖಲಿಸುವಲ್ಲಿ ಅವರು ವಹಿಸಿರುವ ಆಸಕ್ತಿ ಪ್ರಶಂಸನೀಯ. ರಾಯಚೂರು, ಕೊಪ್ಪಳ ಮತ್ತು ಗದಗ ಜಿಲ್ಲೆಗಳ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಅನೇಕ ಅಪರೂಪದ ಸಂಗತಿಗಳನ್ನು ತಮ್ಮ ಸಂಶೋಧನಾ ಕೃತಿಗಳಲ್ಲಿ ದಾಖಲಿಸಿದ್ದಾರೆ. ಈ ಕ್ಷೇತ್ರದಲ್ಲಿನ ಅವರ ಕೆಲವು ಕೃತಿಗಳಿಗೆ ಪ್ರಶಸ್ತಿಗಳು ದೊರೆತಿರುವುದಲ್ಲದೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಕೆಲವು ಕೃತಿಗಳನ್ನು ಪ್ರಕಟಿಸಿದೆ ಎಂದು ಹೇಳಿದರು.
ಹೈದರಾಬಾದ್ ಸಂಸ್ಥಾನದ ವಿಮೋಚನಾ ಹೋರಾಟದ ಕುರಿತು ಸಂಶೋಧನೆ ನಡೆಸುವಾಗ ಅವರು ಕೇವಲ ಲಭ್ಯವಿರುವ ಪುಸ್ತಕಗಳನ್ನೇ ಅವಲಂಬಿಸಿಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರದ ಪತ್ರಾಗಾರಗಳಲ್ಲಿನ ದಾಖಲೆಗಳನ್ನು ಪರಿಶೀಲಿಸಿ, ಮರಾಠಿ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ಕೃತಿಗಳನ್ನೂ ಅಧ್ಯಯನ ಮಾಡಿದ್ದಾರೆ. ಒಂದು ಕೃತಿಯ ಸಿದ್ಧತೆಗಾಗಿ ಸುಮಾರು 20 ವರ್ಷಗಳವರೆಗೆ ಕ್ಷೇತ್ರಕಾರ್ಯ ನಡೆಸಿರುವುದು ಅವರ ಸಂಶೋಧನಾ ಶ್ರದ್ಧೆಯನ್ನು ತೋರಿಸುತ್ತದೆ ಎಂದರು.
ಅವರ ಇತಿಹಾಸದ ಅಧ್ಯಯನದಲ್ಲಿ ರಾಜಕೀಯ ಘಟನೆಗಳಿಗಿಂತಲೂ ಮಿಗಿಲಾಗಿ ಜನಸಾಮಾನ್ಯರ ಬದುಕಿನ ಚಿತ್ರಣಕ್ಕೆ ಆದ್ಯತೆ ನೀಡಲಾಗಿದೆ. ಈ ಭಾಗದಲ್ಲಿ ಹಿಂದೆ ಸಂಭವಿಸಿದ ಬರಗಾಲಗಳು, ಸಾಮಾಜಿಕ ಬದಲಾವಣೆಗಳು, ಆರ್ಥಿಕ ಸ್ಥಿತಿಗತಿಗಳು, ಧಾರ್ಮಿಕ ಸಂಸ್ಥೆಗಳ ಪಾತ್ರ ಹಾಗೂ ಶೈಕ್ಷಣಿಕ ಬೆಳವಣಿಗೆಗಳ ಕುರಿತು ಅವರು ದಾಖಲಿಸಿರುವ ಮಾಹಿತಿಗಳು ಸಂಶೋಧಕರಿಗೆ ಉಪಯುಕ್ತವಾಗಿವೆ ಎಂದು ತಿಳಿಸಿದರು.
ಇತಿಹಾಸದ ಪುಟಗಳಲ್ಲಿ ಮಹಿಳೆಯರ ಕೊಡುಗೆಗಳು ಬಹುತೇಕ ಕಡೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಆದರೆ ಹವಳೆ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಸಂಜಮ್ಮ, ಲಕ್ಷ್ಮೀದೇವಮ್ಮ, ಮಾರೆಯಮ್ಮ, ಲಂಗಮ್ಮ ಸೇರಿದಂತೆ ಅನೇಕ ಮಹಿಳೆಯರ ಸೇವೆಯನ್ನು ಗುರುತಿಸಿ ದಾಖಲಿಸಿದ್ದಾರೆ. ಚಳ್ಳೆ ಶಿಬಿರದಲ್ಲಿ ಹೋರಾಟಗಾರರಿಗೆ ಆಶ್ರಯ ಮತ್ತು ನೆರವು ನೀಡಿದ ಬಸಮ್ಮ ಅವರಂತಹ ಮಹಿಳೆಯರ ಪಾತ್ರವನ್ನು ಬೆಳಕಿಗೆ ತಂದಿರುವುದು ಅವರ ಸಂಶೋಧನೆಯ ಮಹತ್ವದ ಅಂಶವಾಗಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ನೇರ ಒಡನಾಟ ಹೊಂದಿ ಅವರ ಅನುಭವಗಳನ್ನು ಆಲಿಸುವ ಮೂಲಕ ಮೌಖಿಕ ಇತಿಹಾಸವನ್ನೂ ಸಂಗ್ರಹಿಸಿದ್ದಾರೆ. ಇದರಿಂದ ಅವರ ಕೃತಿಗಳು ಕೇವಲ ಘಟನೆಗಳ ವಿವರಣೆಯಾಗದೆ, ಆ ಕಾಲದ ಜನಜೀವನ, ಹೋರಾಟದ ವಾತಾವರಣ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುವ ಆಕರಗಳಾಗಿವೆ. ಅವರ ಚದುರಿಹೋಗಿರುವ ಲೇಖನಗಳನ್ನು ಒಂದೆಡೆ ಸಂಗ್ರಹಿಸಿ ಪ್ರಕಟಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಬದುಕಿನ ಒಂದು ಭಾಗದಲ್ಲಿ ಆದರ್ಶ ಶಿಕ್ಷಕರಾಗಿ, ಮತ್ತೊಂದು ಭಾಗದಲ್ಲಿ ಬದ್ಧತೆಯ ಸಂಶೋಧಕರಾಗಿ ಗುರುತಿಸಿಕೊಂಡಿರುವ ರಾಮಣ್ಣ ಹವಳೆ ಅವರು ತಮ್ಮ ಶಿಷ್ಯರನ್ನು ಸಮಾಜದ ಆಸ್ತಿಯನ್ನಾಗಿ ರೂಪಿಸಿದ್ದಾರೆ. ನಿವೃತ್ತಿಯ ನಂತರವೂ ಸಮಾಜದಿಂದ ಅವರು ಪಡೆಯುತ್ತಿರುವ ಗೌರವವು ಅವರ ಸುದೀರ್ಘ ಸೇವೆ ಮತ್ತು ವ್ಯಕ್ತಿತ್ವಕ್ಕೆ ದೊರೆತ ಮನ್ನಣೆಯಾಗಿದೆ ಎಂದು ಡಾ. ಅಮರೇಶ ಯತಗಲ್ ಹೇಳಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ರಾಮಣ್ಣ ಹವಳೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಹಿರಿಯ ಸಾಹಿತಿ ಬಿ.ಜಿ. ಹುಲಿ, ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಶರಣಪ್ಪ ಗೋನಾಳ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತರಾಯ ಶಾಖೆ, ನಾಗರಾಜ ಪಾಟೀಲ್ ಕೊಪ್ಪರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಾನ್ವಿ: ಬರಗಾಲದ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿಯೇ ಇದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಕುಡಿಯುವ…
ಮಾನ್ವಿ: ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರರ ಕುರಿತು ಆಕ್ಷೇಪಾರ್ಹ ಲೇಖನ ಮತ್ತು ವಿಡಿಯೋ ಪ್ರಸಾರ ಮಾಡಿರುವುದನ್ನು ಖಂಡಿಸಿ ಪಟ್ಟಣದ…
ಸಮಸ್ಯೆ ಬಗೆಹರಿಸಲು ವಾರ್ಡ್ ನಂ. 03ರ ನಿವಾಸಿಗಳ ಆಗ್ರಹ ಸಿರವಾರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ. 03ರ…
ರಾಯಚೂರು: ಮಾನವ ಜೀವಕ್ಕೆ ಅಪಾಯಕಾರಿಯಾದ ಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನೇತಾಜಿ ನಗರ ಠಾಣೆ ಪೊಲೀಸರು…
ಮಂತ್ರಾಲಯ: ಕಾರ್ತಿಕ ಪೂರ್ಣಿಮೆಯ ಅಂಗವಾಗಿ ನವೆಂಬರ್ 24ರಂದು ಸಂಜೆ 6 ಗಂಟೆಗೆ ಮಂತ್ರಾಲಯದ ಪವಿತ್ರ ತುಂಗಭದ್ರಾ ನದಿ ತೀರದಲ್ಲಿ 'ತುಂಗಾರತಿ–ಪುಣ್ಯನದಿ…
ಗದಗ: ಭಾರತೀಯ ಜನತಾ ಯುವ ಮೋರ್ಚಾ ಗದಗ ಜಿಲ್ಲಾ ಘಟಕದ ವತಿಯಿಂದ ವಿದ್ಯಾರ್ಥಿಗಳಿಗಾಗಿ ‘ಪ್ರಜಾಪ್ರಭುತ್ವ, ಅರಾಜಕತೆಯಲ್ಲ’ (Democracy, Not Anarchy)…