ಮಂತ್ರಾಲಯ: ಕಲಿಯುಗದ ಕಾಮಧೇನು, ನಂಬಿದ ಭಕ್ತರ ಕಲ್ಪವೃಕ್ಷವೆಂದೇ ಆರಾಧಿಸಲ್ಪಡುವ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯ ಸರ್ವಾಂಗೀಣವಾಗಿ ಸಜ್ಜಾಗಿದೆ. ಆ.27ರಿಂದ ಸೆ.2ರವರೆಗೆ ನಡೆಯಲಿರುವ ಸಪ್ತರಾತ್ರೋತ್ಸವಕ್ಕೆ ದೇಶದ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅವರ ದರ್ಶನ, ವಸತಿ, ಅನ್ನದಾನ, ಆರೋಗ್ಯ ಹಾಗೂ ಸಾರಿಗೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಶ್ರೀಮಠದ ವತಿಯಿಂದ ಕೈಗೊಳ್ಳಲಾಗಿದೆ.
ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂತ್ರಾಲಯದಾದ್ಯಂತ ಸಿದ್ಧತೆಗಳು ಭರದಿಂದ ಸಾಗಿದ್ದು, ಮೂಲ ಬೃಂದಾವನದ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವಿವಿಧ ಹಂತಗಳಲ್ಲಿ ವ್ಯವಸ್ಥೆ ರೂಪಿಸಲಾಗಿದೆ. ವಿಶೇಷವಾಗಿ ವಯೋವೃದ್ಧರು, ದಿವ್ಯಾಂಗರು, ಮಕ್ಕಳು ಹಾಗೂ ತಾಯಂದಿರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಕಲ್ಪಿಸಿರುವುದು ಗಮನಾರ್ಹವಾಗಿದೆ.
ಆ.27ರಂದು ಧ್ವಜಾರೋಹಣ ಹಾಗೂ ಉಪಾಕರ್ಮದೊಂದಿಗೆ ಸಪ್ತರಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ಧಾನ್ಯಪೂಜೆ, ಲಕ್ಷ್ಮೀಪೂಜೆ, ಗೋ ಪೂಜೆ, ಅಶ್ವಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಆ.28ರಂದು ಶಾಖೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ನೂತನವಾಗಿ ನಿರ್ಮಿಸಿರುವ ಪರಿಮಳ ಪುಷ್ಕರಣಿಯಲ್ಲಿ ಸಂಜೆ 6.30ರಿಂದ 7 ಗಂಟೆಯವರೆಗೆ ತೆಪ್ಪೋತ್ಸವ ನಡೆಯಲಿದೆ.
ಆ.29ರಂದು ಪೂರ್ವಾರಾಧನಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ತೆಪ್ಪೋತ್ಸವ ನಡೆಯಲಿದ್ದು, ಶ್ರೀಮಠದ ಪ್ರತಿಷ್ಠಿತ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನ್ಯಾಯ, ಅಲಂಕಾರ ಹಾಗೂ ವೇದಾಂತ ಶಾಸ್ತ್ರಗಳಲ್ಲಿ ಪರಿಣತಿ ಹೊಂದಿರುವ ಡಾ. ಎನ್. ವಾದಿರಾಜ ಆಚಾರ್ಯ ಹಾಗೂ ತಮಿಳುನಾಡಿನ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವೈದ್ಯ ಸುಬ್ರಮಣ್ಯಂ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಯರು ಬೃಂದಾವನ ಪ್ರವೇಶಿಸಿದ ಪವಿತ್ರ ದಿನದ ಸ್ಮರಣಾರ್ಥ ಆ.30ರಂದು ಮಧ್ಯಾರಾಧನೆ ಮಹೋತ್ಸವ ನಡೆಯಲಿದೆ. ಬೆಳಿಗ್ಗೆ ಸುಮಾರು 9 ಗಂಟೆಗೆ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತಾಭಿಷೇಕ ನೆರವೇರಲಿದ್ದು, ಬಳಿಕ ಮಠದ ಪ್ರಾಕಾರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಆ.31ರಂದು ಉತ್ತರಾರಾಧನಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ನಡೆಯಲಿದೆ. ಉತ್ಸವಮೂರ್ತಿಗಳನ್ನು ವಾದ್ಯ ವೈಭವ ಹಾಗೂ ವೇದ ಪಾರಾಯಣದೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ದು ವಿಶೇಷ ಪೂಜೆಗಳನ್ನು ನೆರವೇರಿಸಲಾಗುವುದು.
ವಸಂತೋತ್ಸವ ಹಾಗೂ ಉತ್ಸವಮೂರ್ತಿಗಳ ಮೆರವಣಿಗೆಯ ಬಳಿಕ ಮಹಾರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಬೆಂಗಳೂರಿನ ಉದ್ಯಮಿ ಹಾಗೂ ಸಾಮಾಜಿಕ ಸೇವಕರಾದ ಕಿರಣ್ ಅವರು ಹೆಲಿಕಾಪ್ಟರ್ ಮೂಲಕ ಆಗಮಿಸಿ ರಥದ ಮೇಲೆ ಪುಷ್ಪವೃಷ್ಟಿ ನೆರವೇರಿಸಲಿದ್ದಾರೆ. ಬಳಿಕ ಮಹಾರಥವು ಮಂತ್ರಾಲಯದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಘವೇಂದ್ರ ಸರ್ಕಲ್‌ವರೆಗೆ ತೆರಳಿ ಶ್ರೀಮಠಕ್ಕೆ ಮರಳಲಿದೆ.
ಆರಾಧನಾ ಮಹೋತ್ಸವಕ್ಕೆ ವಿವಿಧ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಂದಲೂ ವಿಶೇಷ ಕೊಡುಗೆ ಸಲ್ಲಿಕೆಯಾಗಲಿದೆ. ತಿರುಮಲ ತಿರುಪತಿ ದೇವಸ್ಥಾನದಿಂದ ಶ್ರೀನಿವಾಸನ ವಸ್ತ್ರ ಪ್ರಸಾದ ಹಾಗೂ ತಮಿಳುನಾಡಿನ ಶ್ರೀರಂಗ ಕ್ಷೇತ್ರದಿಂದ ರಂಗನಾಥ ದೇವರ ವಸ್ತ್ರ ಪ್ರಸಾದ ರಾಯರಿಗೆ ಸಮರ್ಪಣೆಯಾಗಲಿದೆ.
ನಾಡಿನ ಹಾಗೂ ನೆರೆಯ ರಾಜ್ಯಗಳ ವಿವಿಧ ದೇವಸ್ಥಾನಗಳಿಂದಲೂ ಶೇಷವಸ್ತ್ರ ಪ್ರಸಾದ ಸಮರ್ಪಣೆಯಾಗಲಿದ್ದು, ಹಲವು ಗ್ರಂಥಗಳ ಆವಿಷ್ಕಾರ ಹಾಗೂ ಗಣ್ಯರ ಆಗಮನವೂ ಆರಾಧನಾ ಮಹೋತ್ಸವದ ವಿಶೇಷತೆಗಳಾಗಿವೆ.
ದೂರದ ಊರುಗಳಿಂದ ಆಗಮಿಸುವ ಭಕ್ತರಿಗೆ ಎರಡು ಹೊತ್ತು ಉಚಿತ ಅನ್ನದಾನ, ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಹಾಗೂ ಉಚಿತ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ರಾಯಚೂರಿನ ನವೋದಯ ವೈದ್ಯಕೀಯ ಸಂಸ್ಥೆಯ ಸಹಯೋಗದಲ್ಲಿ ವೈದ್ಯರ ತಂಡವನ್ನು ನಿಯೋಜಿಸಲಾಗಿದ್ದು, ಅಗತ್ಯ ವೈದ್ಯಕೀಯ ಸೇವೆ ಹಾಗೂ ಔಷಧೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಭಕ್ತರ ದರ್ಶನ ವ್ಯವಸ್ಥೆಯಲ್ಲಿಯೂ ವಿಶೇಷ ಗಮನಹರಿಸಲಾಗಿದ್ದು, ವಯೋವೃದ್ಧರು, ದಿವ್ಯಾಂಗರು, ಮಕ್ಕಳು ಹಾಗೂ ತಾಯಂದಿರಿಗೆ ಪ್ರತ್ಯೇಕ ಸರತಿ ವ್ಯವಸ್ಥೆ ಮಾಡಲಾಗಿದೆ. ಸೇವಾಕರ್ತರಿಗೆ ಪ್ರತ್ಯೇಕ ಸರತಿ, ಸಾಮೂಹಿಕವಾಗಿ ಆಗಮಿಸುವ ಭಕ್ತರಿಗೆ ಕ್ಯೂ ಕಾಂಪ್ಲೆಕ್ಸ್ ಹಾಗೂ ಓವರ್‌ಬ್ರಿಡ್ಜ್ ಮೂಲಕ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ.
ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗಿದೆ. ಹೈಸ್ಕೂಲ್ ಮುಂಭಾಗದ ಶ್ರೀಮಠದ ಜಾಗದಲ್ಲಿ ಆಟೋಗಳಿಗೆ ಪ್ರತ್ಯೇಕ ನಿಲ್ದಾಣ ನಿರ್ಮಿಸಿ ಸರತಿ ವ್ಯವಸ್ಥೆ ಮಾಡಲಾಗಿದೆ.
ಇದರ ಜೊತೆಗೆ ಆಂಧ್ರಪ್ರದೇಶದ ಆಂದ್ಯಾಳ ಜಿಲ್ಲೆ ಕೇಂದ್ರದಿಂದ ರಾಯರ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕಿಂಗ್ ಕೋಚಿಂಗ್ ಸಂಸ್ಥೆ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಸಹಕಾರದಿಂದ ಆರು ಉಚಿತ ಬಸ್‌ಗಳನ್ನು ನಿಯೋಜಿಸಲಾಗಿದೆ.
ಬಸ್ ನಿಲ್ದಾಣ, ದೊಡ್ಡ ಆಂಜನೇಯ ದೇವಸ್ಥಾನ, ನದಿ ತೀರ ಸೇರಿದಂತೆ ವಿವಿಧ ಸ್ಥಳಗಳಿಂದ ಭಕ್ತರನ್ನು ಉಚಿತವಾಗಿ ಮಠದವರೆಗೆ ಕರೆತರುವ ವ್ಯವಸ್ಥೆ ಮಾಡಲಾಗಿದ್ದು, ಖಾಸಗಿ ವಾಹನಗಳ ಒತ್ತಡ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ದೂರದ ಊರುಗಳಿಂದ ಬರುವ ಭಕ್ತರಿಗಾಗಿ ಮಠದ ವಸತಿ ಸೌಲಭ್ಯಗಳನ್ನು ಸ್ವಚ್ಛಗೊಳಿಸಿ ಸಿದ್ಧಪಡಿಸಲಾಗಿದೆ. ಡೋನರ್‌ಗಳು ಹಾಗೂ ಸಾಮಾನ್ಯ ಭಕ್ತರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾಮೂಹಿಕ ವಸತಿಗಾಗಿ ನೂತನ ಇಮ್ಯುನಿಟಿ ಸೆಂಟರ್ ಹಾಗೂ ಡಾರ್ಮೆಟ್ರಿ ವ್ಯವಸ್ಥೆಯನ್ನೂ ಸಜ್ಜುಗೊಳಿಸಲಾಗಿದೆ.
ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ನದಿಯಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ತಾತ್ಕಾಲಿಕ ಸ್ನಾನದ ಶವರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಭಕ್ತರು ಸರದಿಯಲ್ಲಿ ಸ್ನಾನ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸೆ.1ರಂದು ಶ್ರೀಮಠದ ಪರಂಪರೆಯ ಪೂರ್ವ ಪೀಠಾಧಿಪತಿಗಳಾದ ಶ್ರೀ ಸುಜ್ಞಾನೇಂದ್ರ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ ನಡೆಯಲಿದೆ.
ಸೆ.2ರಂದು ಸಪ್ತರಾತ್ರೋತ್ಸವದ ಕೊನೆಯ ದಿನವಾದ ಸರ್ವ ಸಮರ್ಪಣೋತ್ಸವ ನಡೆಯಲಿದ್ದು, ಭಕ್ತನಾಥೋತ್ಸವದ ಅಂಗವಾಗಿ ಸುವರ್ಣ ಪಲ್ಲಕ್ಕಿ, ವಿಶೇಷ ಪುಷ್ಪಾಲಂಕೃತ ರಥ ಸೇರಿದಂತೆ ವಿವಿಧ ವಾಹನಗಳಲ್ಲಿ ಉತ್ಸವ ನಡೆಯಲಿದೆ.
ಹೀಗೆ ಏಳು ದಿನಗಳ ಧಾರ್ಮಿಕ ವೈಭವ, ಲಕ್ಷಾಂತರ ಭಕ್ತರ ದರ್ಶನ, ಮಹಾರಥೋತ್ಸವ, ತೆಪ್ಪೋತ್ಸವ, ಅನ್ನದಾನ, ವೈದ್ಯಕೀಯ ಸೇವೆ, ವಸತಿ ಹಾಗೂ ಸಾರಿಗೆ ವ್ಯವಸ್ಥೆ ಸೇರಿದಂತೆ 355ನೇ ಆರಾಧನಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಮಂತ್ರಾಲಯ ಸಜ್ಜಾಗಿದೆ. ರಾಯರ ದರ್ಶನಕ್ಕೆ ಬರುವ ಭಕ್ತರ ಭಕ್ತಿಭಾವಕ್ಕೆ ಯಾವುದೇ ಕೊರತೆಯಾಗದಂತೆ ಸಕಲ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಮಂತ್ರಾಲಯ ಆರಾಧನಾ ಸಂಭ್ರಮಕ್ಕೆ ಸಿದ್ಧಗೊಂಡಿದೆ.
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ಪಟ್ಟಿಯಲ್ಲಿರುವವರ ಅರ್ಹತೆ ಹಾಗೂ ಅವರ ಪ್ರಸ್ತುತ ಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಲು ರಾಜ್ಯ ಸರ್ಕಾರ ಮುಂದಾಗಿದೆ.…
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆರನೇ ದಿನವಾದ ಸೋಮವಾರವೂ ಥಿಯೇಟರ್‌ಗಳಲ್ಲಿ ತನ್ನ ಪ್ರದರ್ಶನ ಮುಂದುವರಿಸಿದೆ.…
ಬಳ್ಳಾರಿ: ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಹೋರಾಟವೇ ಬಳ್ಳಾರಿ…