ರಾಯಚೂರು, ಸೆ.7: ರಾಜ್ಯದ ಮಹಾನಗರ ಪಾಲಿಕೆಗಳು ಸೇರಿದಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್ ಒಳಗಾಗಿ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರು ನಿಗದಿತ ಅವಧಿಯೊಳಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಸರ್ಕಾರದ ನಿರ್ದೇಶನದಂತೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದರು.
ರಾಯಚೂರು ನಗರದ ರಸ್ತೆ, ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸುಮಾರು ₹51 ಕೋಟಿ ಮೊತ್ತದ ಪ್ರಸ್ತಾವನೆ ಸರ್ಕಾರಕ್ಕೆ ಬಂದಿದ್ದು, ಅದಕ್ಕೆ ಅನುಮೋದನೆ ನೀಡಲಾಗುವುದು ಎಂದು ಸಚಿವರು ಹೇಳಿದರು.
2026-27ನೇ ಸಾಲಿನ ಬಜೆಟ್‌ನಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ₹185 ಕೋಟಿ ಅನುದಾನ ಮಂಜೂರಾಗಿದೆ. ಕ್ರಿಯಾ ಯೋಜನೆ ಸಿದ್ಧವಾಗಿದ್ದು, ಅನುಮೋದನೆ ದೊರೆತ ಬಳಿಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ರಾಯಚೂರು ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಾಗಿದ್ದು, ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಯಚೂರು ನಗರದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸುಮಾರು ₹190 ಕೋಟಿ ವೆಚ್ಚದ 24/7 ಕುಡಿಯುವ ನೀರು ಪೂರೈಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಯೋಜನೆಯ ಡಿಪಿಆರ್ ಸಿದ್ಧಪಡಿಸಿದ ಬಳಿಕ ಸರ್ಕಾರಕ್ಕೆ ಸಲ್ಲಿಸಲಾಗುವುದು. ನಗರದ ಪ್ರತಿಯೊಂದು ಮನೆಗೂ ಸಮರ್ಪಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.
ಈ ಹಿಂದೆ ಅಮೃತ್ ಯೋಜನೆಯಡಿ ಆರಂಭಿಸಲಾಗಿದ್ದ 24/7 ನೀರು ಪೂರೈಕೆ ಕಾಮಗಾರಿ ಗುತ್ತಿಗೆದಾರರಿಂದ ಸಮರ್ಪಕವಾಗಿ ನಡೆಯದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಕಾನೂನು ಪ್ರಕ್ರಿಯೆ ಪೂರ್ಣಗೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ನಗರದಲ್ಲಿ ಗೋಶಾಲೆಗಾಗಿ ಬಳಸಲಾಗುತ್ತಿದ್ದ ಸುಮಾರು ನಾಲ್ಕು ಎಕರೆ ಸರ್ಕಾರಿ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಕಟ್ಟಡ ನಿರ್ಮಿಸಿರುವ ಪ್ರಕರಣದ ಕುರಿತು ಮಾತನಾಡಿದ ಸಚಿವರು, ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಮಹಾನಗರ ಪಾಲಿಕೆಯ ಪರವಾಗಿ ಆದೇಶ ಬಂದಿದೆ ಎಂದು ತಿಳಿಸಿದರು.
ಆರ್‌ಟಿಸಿಯಲ್ಲೂ ಪಾಲಿಕೆಯ ಹೆಸರು ದಾಖಲಾಗಿದ್ದು, ಕಟ್ಟಡ ತೆರವಿಗೆ ನೋಟಿಸ್ ನೀಡಲಾಗಿದೆ. ಆದರೆ ಪ್ರಕರಣ ಹೈಕೋರ್ಟ್‌ನಲ್ಲಿರುವುದರಿಂದ ನ್ಯಾಯಾಲಯದ ಅಂತಿಮ ತೀರ್ಪಿನ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಯಚೂರು ಕೋಟೆ ಹಾಗೂ ಕಂದಕ ಪ್ರದೇಶದಲ್ಲಿ ನಡೆದಿರುವ ಒತ್ತುವರಿಗಳನ್ನು ಗುರುತಿಸಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಈಗಾಗಲೇ ಸುಮಾರು ಶೇ.60ರಷ್ಟು ಇ-ಖಾತಾ ವಿತರಿಸಲಾಗಿದೆ. ಬಾಕಿ ಇರುವ ಅರ್ಹ ಫಲಾನುಭವಿಗಳಿಗೆ ಶೀಘ್ರ ಇ-ಖಾತಾ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಇ-ಖಾತಾ ಅರ್ಜಿಗಳಲ್ಲಿ ವಿಳಂಬವಾಗಿರುವ ಪ್ರಕರಣಗಳನ್ನು ಕಂದಾಯ ಅದಾಲತ್ ಮೂಲಕ ಪರಿಶೀಲಿಸಿ, ಅಗತ್ಯ ದಾಖಲೆಗಳ ಆಧಾರದ ಮೇಲೆ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.
ಸಿದ್ದರಾಮಪುರ ಬಡಾವಣೆಯ ನಿವೇಶನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಒಟ್ಟು 400ಕ್ಕೂ ಹೆಚ್ಚು ನಿವೇಶನಗಳ ಪೈಕಿ 101 ನಿವೇಶನಗಳು ಗುಡ್ಡ ಪ್ರದೇಶದಲ್ಲಿವೆ. ಈ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ವೆಚ್ಚವಾಗುವ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಪರ್ಯಾಯ ನಿವೇಶನ ನೀಡುವ ಸಾಧ್ಯತೆ ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದರು.
ಸಮತಟ್ಟಾದ ಪ್ರದೇಶದಲ್ಲಿರುವ 200ಕ್ಕೂ ಹೆಚ್ಚು ನಿವೇಶನಗಳ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಅವರ ಸೇಲ್‌ಡೀಡ್ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಯಚೂರು ಮಹಾನಗರ ಪಾಲಿಕೆಯಲ್ಲಿ ಸುಮಾರು 108 ಪೌರಕಾರ್ಮಿಕರ ಕೊರತೆ ಇರುವುದನ್ನು ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಅಗತ್ಯವಿದ್ದರೆ ಗುತ್ತಿಗೆ ಆಧಾರದಲ್ಲಿಯೂ ಹೆಚ್ಚುವರಿ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಿ ನಗರದ ಸ್ವಚ್ಛತಾ ವ್ಯವಸ್ಥೆಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಸ್ವಚ್ಛತಾ ಕಾರ್ಯಕ್ಕೆ ಅಗತ್ಯವಿರುವ ವಾಹನಗಳಲ್ಲಿಯೂ ಸುಮಾರು 58 ವಾಹನಗಳ ಕೊರತೆ ಇದೆ. ಕೆಲವು ಹೊಸ ವಾಹನಗಳನ್ನು ಈಗಾಗಲೇ ಖರೀದಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಇನ್ನಷ್ಟು ವಾಹನಗಳನ್ನು ಒದಗಿಸಲಾಗುವುದು ಎಂದರು.
ರಾಯಚೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸುಮಾರು ₹100 ಕೋಟಿ ವೆಚ್ಚದಲ್ಲಿ ರಿಂಗ್‌ರೋಡ್ ನಿರ್ಮಿಸುವ ಪ್ರಸ್ತಾವನೆ ಇದೆ ಎಂದು ಸಚಿವರು ತಿಳಿಸಿದರು.
ಯೋಜನೆಗೆ ಸಂಬಂಧಿಸಿದ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಅಗತ್ಯ ಅನುದಾನ ಒದಗಿಸಿ ಮುಂದಿನ ಹಂತದಲ್ಲಿ ಯೋಜನೆ ಜಾರಿಗೊಳಿಸಲಾಗುವುದು ಎಂದರು.
ಇತ್ತೀಚೆಗೆ ನಡೆದ ಕಾರ್ಯಕ್ರಮವನ್ನು ‘ಅಹಿಂದ ಸಭೆ’ ಎಂದು ಕರೆಯುವುದು ಸರಿಯಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಹಿಂದುಳಿದ ವರ್ಗಗಳ ಒಕ್ಕೂಟ ಸ್ಥಾಪನೆಯಾಗಿ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಥ ಮಹೋತ್ಸವ ಆಯೋಜಿಸಲಾಗಿತ್ತು. ಅದಕ್ಕೂ ಅಹಿಂದ ಸಭೆಗೂ ಯಾವುದೇ ಸಂಬಂಧವಿಲ್ಲ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದ್ದು, ಅವರು ಭಾಗವಹಿಸಿದ್ದರು ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾರ್ಯಕ್ರಮಕ್ಕೆ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ಆಯೋಜಕರೇ ನಿರ್ಧರಿಸುತ್ತಾರೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾದಾಗ ಪರಿಹಾರ ಒದಗಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಜತೆಗೆ ಕೇಂದ್ರ ಸರ್ಕಾರಕ್ಕೂ ಇದೆ ಎಂದು ಸಚಿವರು ಹೇಳಿದರು.
ಹಿಂದೆ ರಾಜ್ಯಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸೇರಿದಂತೆ ಸಚಿವರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನ ಮೊರೆ ಹೋಗಬೇಕಾದ ಪರಿಸ್ಥಿತಿಯೂ ಎದುರಾಗಿತ್ತು ಎಂದು ಅವರು ನೆನಪಿಸಿದರು.
ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ಅಗತ್ಯವಿರುವ ಸಂದರ್ಭದಲ್ಲಿ ರಾಜ್ಯಕ್ಕೆ ಸೂಕ್ತ ಅನುದಾನ ದೊರೆಯುತ್ತಿಲ್ಲ. ಈ ಬಾರಿ ರೈತರ ಪರವಾಗಿ ಕೇಂದ್ರದಿಂದ ಬರ ಪರಿಹಾರ ಪಡೆಯಲು ಸರ್ಕಾರ ಅಗತ್ಯವಿರುವ ಎಲ್ಲ ಹಂತದ ಹೋರಾಟಕ್ಕೂ ಸಿದ್ಧವಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಸಭೆಯಲ್ಲಿ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್. ಭೋಸರಾಜು ಹಾಗೂ ಎ. ವಸಂತಕುಮಾರ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾಧಿಕಾರಿ ಪೂವಿತಾ ಎಸ್., ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಲೇಖಕರು - ಶ್ರೀಮತಿ ಡಿ. ಕೋಮಲ, ರಾಯಚೂರು ಗುರುಶ್ರೀ ವಿ. ಎಸ್. ಕಾಂತನವರ ಅವರು ಕನ್ನಡ ಮತ್ತು ಹಿಂದಿ ಎರಡೂ…
ರಾಯಚೂರು: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ವೇಳೆ ಅಧಿಕಾರಿಗಳೊಂದಿಗೆ ವಿಶ್ವವಿದ್ಯಾಲಯದಲ್ಲಿ ಪ್ರಗತಿಯಲ್ಲಿರುವ ವಿವಿಧ ಪ್ರಮುಖ ಅಭಿವೃದ್ಧಿ…
ರಾಯಚೂರು: ರಾಯಚೂರು ಗ್ರಾಮೀಣ ಕ್ಷೇತ್ರದ ಮಟಮಾರಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಮ್ಯಾಕ್ರೋ ಯೋಜನೆಯಡಿ ₹3…
ಸಿರವಾರ: ಸಚಿವ ಸತೀಶ ಜಾರಕಿಹೊಳಿ ಅವರ ಮೇಲೆ ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತವಾಗಿ ED ದಾಳಿ ನಡೆಸಿದೆ ಎಂದು ಆರೋಪಿಸಿ,…
ರಾಯಚೂರು: ನಗರದ ಪೋತಗಲ್ ರಸ್ತೆಯ ಮನೆಯೊಂದರಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ ಘಟನೆ…
ರಾಯಚೂರು: ನಗರದ ವಾರ್ಡ್ ನಂ.22ರಲ್ಲಿ ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಅವರು ಭಾನುವಾರ ಮನೆ-ಮನೆಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳನ್ನು…