ಗಣೇಶ ಚತುರ್ಥಿ ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ವಿಘ್ನನಿವಾರಕ, ಬುದ್ಧಿ ಮತ್ತು ವಿದ್ಯೆಯ ಅಧಿಪತಿಯಾದ ಶ್ರೀ ಗಣೇಶನ ಜನ್ಮವನ್ನು ಸ್ಮರಿಸುವುದರ ಜೊತೆಗೆ ಅತ್ಯಂತ ಭಕ್ತಿ-ಭಾವದಿಂದ ಆಚರಿಸಲಾಗುತ್ತದೆ. ಪ್ರತಿವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ವಿಶೇಷ ಮಹತ್ವವಿದೆ. 1892ರಲ್ಲಿ ಮಹಾರಾಷ್ಟ್ರದಲ್ಲಿ ಬಾವ ಸಾಹೇಬ್ ಲಕ್ಷ್ಮಣ ಜವೇಲ್ ಅವರು ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುವ ಪರಂಪರೆಯನ್ನು ಆರಂಭಿಸಿದರು. ಇದರ ಮೂಲಕ ಜನರಲ್ಲಿ ರಾಷ್ಟ್ರೀಯ ಏಕತೆ ಮತ್ತು ದೇಶಭಕ್ತಿ ಮೂಡಿತು. ಜನರು ತಮ್ಮ ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ಹಾಗೂ ಧಾರ್ಮಿಕ ಪ್ರವಚನಗಳನ್ನು ಆಯೋಜಿಸುತ್ತಾರೆ. ಗಣೇಶೋತ್ಸವವು ಭಕ್ತಿ, ಐಕ್ಯತೆ, ಸಹೋದರತೆ ಮತ್ತು ಸಾಂಸ್ಕೃತಿಕ ಪರಂಪರೆ ಹಾಗೂ ರಾಷ್ಟ್ರೀಯ ಐಕ್ಯತೆಯನ್ನು ಬೆಳೆಸುವ ಹಬ್ಬವಾಗಿದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸುವುದು ಮತ್ತು ಪರಿಸರ ಸ್ನೇಹಿಯಾಗಿ ಈ ಹಬ್ಬವನ್ನು ಆಚರಿಸುವುದು ಇಂದು ಅತ್ಯವಶ್ಯಕವಾಗಿದೆ.
ಪರಿಸರ ಸ್ನೇಹಿ ಗಣೇಶೋತ್ಸವವನ್ನು ಆಚರಿಸಲು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ಬದಲು ನೈಸರ್ಗಿಕ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಇದು ನೀರಿನಲ್ಲಿ ಸುಲಭವಾಗಿ ಕರಗುತ್ತದೆ ಮತ್ತು ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ರಾಸಾಯನಿಕ ಬಣ್ಣಗಳ ಬದಲಿಗೆ ಅರಿಶಿನ, ಕುಂಕುಮ ಮುಂತಾದ ನೈಸರ್ಗಿಕ ಬಣ್ಣಗಳಿಂದ ಅಲಂಕರಿಸಿದ ಗಣೇಶ ಮೂರ್ತಿಗಳನ್ನು ಮಾರುಕಟ್ಟೆಯಿಂದ ತರಬೇಕು. ಪ್ಲಾಸ್ಟಿಕ್ ಅಲಂಕಾರಗಳನ್ನು ಬಳಸದೆ, ಪರಿಸರ ಸ್ನೇಹಿ ಹೂವುಗಳು, ಎಲೆಗಳು, ಬಾಳೆ ಕಂಬ, ಮಾವಿನ ತೋರಣ, ಬಟ್ಟೆಯ ಅಲಂಕಾರ ಹಾಗೂ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಬೇಕು.(ಎಡೆದೊರೆ ನ್ಯೂಸ್)
ಶಬ್ದ ಮಾಲಿನ್ಯ ನಿಯಂತ್ರಿಸಬೇಕು. ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಅತಿಯಾದ ಶಬ್ದದ ಡಿಜೆ, ಪಟಾಕಿ ಹಾಗೂ ಧ್ವನಿವರ್ಧಕಗಳ ಬಳಕೆಯನ್ನು ಕಡಿಮೆ ಮಾಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಭಕ್ತಿಭಾವದಿಂದ ಗಣೇಶ ಹಬ್ಬವನ್ನು ಆಚರಿಸಬೇಕು.
ನೀರಿನ ಸಂರಕ್ಷಣೆ: ಗಣೇಶ ವಿಸರ್ಜನೆಯನ್ನು ಮನೆಯಲ್ಲಿಯೇ ಅಥವಾ ಕೃತಕ ವಿಸರ್ಜನಾ ಕುಂಡಗಳಲ್ಲಿ ಮಾಡುವುದರಿಂದ ನದಿ, ಕೆರೆ ಹಾಗೂ ಇತರ ಜಲಮೂಲಗಳು ಮಾಲಿನ್ಯವಾಗುವುದನ್ನು ತಡೆಯಬಹುದು.Karnataka news
ಪ್ಲಾಸ್ಟಿಕ್ ಬಳಕೆ ಬೇಡ: ಒಮ್ಮೆ ಮಾತ್ರ ಬಳಸುವ ಪ್ಲಾಸ್ಟಿಕ್ ತಟ್ಟೆ, ಕಪ್ ಮತ್ತು ಚೀಲಗಳ ಬದಲು ಎಲೆ ತಟ್ಟೆ, ತಾಮ್ರದ ಪಾತ್ರೆಗಳು ಅಥವಾ ಬಟ್ಟೆಯ ಚೀಲಗಳನ್ನು ಬಳಸಬೇಕು.
ಗಿಡ ನೆಡುವ ಸಂಕಲ್ಪ: ಗಣೇಶೋತ್ಸವದ ಅಂಗವಾಗಿ ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಒಂದು ಗಿಡವನ್ನು ನೆಟ್ಟು ಅದರ ಆರೈಕೆಯ ಸಂಕಲ್ಪ ಮಾಡುವುದರ ಜೊತೆಗೆ, “ಪರಿಸರ ಉಳಿದರೆ ನಮ್ಮ ಭವಿಷ್ಯ ಉಳಿಯುತ್ತದೆ. ಮಣ್ಣಿನ ಗಣೇಶನನ್ನು ಕೂಡಿಸಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಿ. ಹಸಿರು ಭೂಮಿ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸೋಣ.” ಎಂಬುದು ನಮ್ಮ ಸಂಕಲ್ಪವಾಗಬೇಕು.(ಪರಿಸರ ಸ್ನೇಹಿ ಗಣೇಶ)
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಹಬ್ಬದ ಆಚರಣೆಯಿಂದ ನೈಸರ್ಗಿಕ ಜಲಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ 2016ರ ಜುಲೈ 20ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಇನ್ನು ಮುಂದೆ ರಾಜ್ಯದ ಯಾವುದೇ ಕೆರೆ ಮತ್ತು ಇತರ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಿಸಿ ನೈಸರ್ಗಿಕ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಬೇಕಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಪಿಒಪಿಯಿಂದ ಗಣೇಶ ಮೂರ್ತಿ ತಯಾರಿಸಿ, ಮಾರಾಟ ಹಾಗೂ ವಿಸರ್ಜನೆಗೆ ಸಂಬಂಧಿಸಿದಂತೆ ದಿನಾಂಕ: 12.05.2020ರಂದು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿ, ನೀರಿನ ಮೂಲಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಜಲ (ಮಾಲಿನ್ಯ ನಿಯಂತ್ರಣ ಮತ್ತು ನಿವಾರಣಾ) ಕಾಯ್ದೆ, 1974ರ ಕಲಂ 33(ಎ) ಅಡಿಯಲ್ಲಿ ಈ ರೀತಿಯ ವಿಗ್ರಹಗಳ ಉತ್ಪಾದನಾ ಘಟಕವನ್ನು ಮುಚ್ಚುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಇರುತ್ತದೆ. ಈ ವಿಗ್ರಹಗಳನ್ನು ಯಾವುದೇ ನೀರಿನ ಮೂಲಗಳಿಗೆ ವಿಸರ್ಜನೆ ಮಾಡುವುದು ಕಾಯ್ದೆಯ ಕಲಂ 24ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಈ ಕಾಯ್ದೆಯ ಕಲಂ 41 ಹಾಗೂ 43ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ಅಪರಾಧಕ್ಕೆ ದಂಡದೊಂದಿಗೆ ಕನಿಷ್ಠ ಒಂದೂವರೆ ವರ್ಷ ಹಾಗೂ ಗರಿಷ್ಠ ಆರು ವರ್ಷಗಳ ಕಾರಾಗೃಹವಾಸದ ಜೊತೆಗೆ ಈ ಉಲ್ಲಂಘನೆಗೆ ಪರಿಸರ (ಸಂರಕ್ಷಣಾ) ಕಾಯ್ದೆ, 1986ರಡಿಯಲ್ಲಿಯೂ ಸಹ ಕ್ರಮ ಜರುಗಿಸಬಹುದಾಗಿರುತ್ತದೆ. ಅಂತಹ ಉದ್ಯಮ ಅಥವಾ ಉತ್ಪಾದನಾ ಘಟಕವನ್ನು ಪರಿಸರ (ಸಂರಕ್ಷಣಾ) ಕಾಯ್ದೆ, 1986ರ ಕಲಂ 5ರಡಿಯಲ್ಲಿ ಮುಚ್ಚುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಈ ಕಾಯ್ದೆಯ ಉಲ್ಲಂಘನೆ ಕಲಂ 15ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಅದಕ್ಕೆ ಗರಿಷ್ಠ ಒಂದು ಲಕ್ಷ ರೂಪಾಯಿಗಳ ದಂಡದೊಂದಿಗೆ ಗರಿಷ್ಠ 5 ವರ್ಷದ ಕಾರಾಗೃಹವಾಸದ ಶಿಕ್ಷೆಗೆ ಒಳಪಡಬೇಕಾಗುತ್ತದೆ.
ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಮಣ್ಣಿನಿಂದ ತಯಾರಿಸಿದ ಗಣಪತಿಗಳನ್ನು ನಮ್ಮ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿ ಆಚರಿಸೋಣ. ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಗಣಪತಿಗಳನ್ನು ಬಳಸಿದರೆ ಅವುಗಳನ್ನು ನದಿ, ಬಾವಿ, ಹಳ್ಳ ಮತ್ತು ಕೆರೆ ಇತ್ಯಾದಿಗಳಲ್ಲಿ ವಿಸರ್ಜಿಸಿದಾಗ ಈ ವಿಗ್ರಹಗಳ ಮೂಲವಸ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ). ಇದರ ರಾಸಾಯನಿಕ ಮೂಲ ಹೆಸರು “ಕ್ಯಾಲ್ಸಿಯಮ್ ಸಲ್ಪೇಟ್ ಹೆಮಿಹೈಡ್ರೇಟ್”. ಇದರಿಂದ ತಯಾರಿಸಿದ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜಿಸಿದಾಗ, ಅವುಗಳು ನೀರಿನಲ್ಲಿ ನಿಧಾನವಾಗಿ ಕರಗುವುದರಿಂದ ನೀರಿನಲ್ಲಿನ ಕರಗಿದ ಆಮ್ಲಜನಕದ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗುತ್ತದೆ ಹಾಗೂ ಅದರಲ್ಲಿ ಕ್ಯಾಲ್ಸಿಯಂ ಅಂಶ ಇರುವುದರಿಂದ ನೀರಿನ ಶಾಶ್ವತ ಗಡಸುತನ ಸಹ ಹೆಚ್ಚಾಗುತ್ತದೆ.
ವಿಗ್ರಹಗಳಲ್ಲಿ ಉಪಯೋಗಿಸಲಾದ ರಾಸಾಯನಿಕಯುಕ್ತ ಬಣ್ಣಗಳಲ್ಲಿರುವ ಭಾರಲೋಹಗಳಾದ ಮರ್ಕ್ಯುರಿ, ಆರ್ಸೆನಿಕ್, ಲೆಡ್, ಕ್ರೋಮಿಯಂ, ತಾಮ್ರ, ಕ್ಯಾಡ್ಮಿಯಂ, ಕೋಬಾಲ್ಟ್, ಸತು ಇತ್ಯಾದಿ ಹಾನಿಕಾರಕ ವಸ್ತುಗಳು ಕ್ರಮೇಣ ನೀರಿನಲ್ಲಿ ಬೆರೆತು ನೀರಿನ ಮೂಲಗಳು ಕಲುಷಿತವಾಗುತ್ತವೆ. ಅಲ್ಲದೆ, ನೀರಿನಲ್ಲಿನ ವಿವಿಧ ಜೀವಿಗಳಾದ ಮೀನುಗಳು ಹಾಗೂ ಇತರೆ ಜಲಚರಗಳು ಸಾವನ್ನಪ್ಪುವ ಸಂಭವವಿರುತ್ತದೆ. ಈ ನೀರನ್ನು ಬಳಸುವಂತಹ ಸುತ್ತಮುತ್ತಲಿನ ಜನರು ಹಾಗೂ ಜಾನುವಾರುಗಳಿಗೆ ವಿವಿಧ ರೀತಿಯ ಕಾಯಿಲೆಗಳು ಮತ್ತು ಕ್ಯಾನ್ಸರ್ ಕಾರಕವಾಗುವಂತಹ ಇತರೆ ರೋಗರುಜಿನಗಳು ಬರುವ ಸಾಧ್ಯತೆಗಳಿರುತ್ತವೆ ಎಂದು ಹಲವಾರು ವಿಶ್ಲೇಷಣೆ ಮತ್ತು ಅಧ್ಯಯನಗಳು ಹೇಳುತ್ತವೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಕುರಿತು ಈಗಾಗಲೇ ಗಣೇಶ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಪೂರ್ವಭಾವಿ ಸಭೆಗಳನ್ನು ಮಾಡಿ ಮಾಹಿತಿ ನೀಡುವುದರ ಜೊತೆಗೆ ಪತ್ರಿಕಾ ಪ್ರಕಟಣೆ ಮೂಲಕವೂ ಸರ್ಕಾರದ ಮಾರ್ಗಸೂಚಿಗಳನ್ವಯ ಗಣೇಶ ಹಬ್ಬಗಳನ್ನು ಆಚರಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸರ್ಕಾರದ ಮಾರ್ಗಸೂಚಿಗಳು ಸಾರ್ವಜನಿಕರ ಒಳಿತಿಗಾಗಿಯೇ ಇರುವುದರಿಂದ ಅವುಗಳನ್ನು ಪಾಲನೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ನಮ್ಮ ಸಂತೋಷ ಇತರರಿಗೆ ನೋವುಂಟು ಮಾಡಬಾರದು. ಏಕೆಂದರೆ ಗಣೇಶ ಪ್ರತಿಷ್ಠಾಪನೆ ಸ್ಥಳದ ಅಕ್ಕಪಕ್ಕದ ಮನೆಗಳಲ್ಲಿ ವೃದ್ಧರು, ರೋಗಿಗಳು, ಗರ್ಭಿಣಿ ಮಹಿಳೆಯರು, ಚಿಕ್ಕ ಮಕ್ಕಳು ಇರುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಶಬ್ದವಿಟ್ಟು ಧ್ವನಿವರ್ಧಕಗಳನ್ನು ಬಳಸಬಾರದು. ಇದರಿಂದ ಅವರಿಗೆ ತೊಂದರೆಯಾಗುತ್ತದೆ.
ಈ ವರ್ಷ ಮಳೆ ಕಡಿಮೆ ಆಗಿರುವುದರಿಂದ ಬಾವಿ, ಕೆರೆ ಹಾಗೂ ಹಳ್ಳ-ಕೊಳ್ಳಗಳಲ್ಲಿ ನೀರು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಆ ನೀರು ಕಲುಷಿತವಾದರೆ ಪ್ರಾಣಿ-ಪಕ್ಷಿಗಳಿಗೂ ಕುಡಿಯಲು ಯೋಗ್ಯವಾಗದ ನೀರಾಗುತ್ತದೆ. ಹಾಗಾಗಿ ನಾವು ನೀರಿನ ಸಂರಕ್ಷಣೆ ಜೊತೆಗೆ ಪರಿಸರ ಸ್ನೇಹಿಯಾಗಿ ಈ ವರ್ಷದ ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸುವ ಮೂಲಕ ಮೋದಕಪ್ರಿಯ ಗೌರಿ ಗಣೇಶನ ಪ್ರೀತಿಗೆ ನಾವೆಲ್ಲರೂ ಪಾತ್ರರಾಗೋಣ.
ಲೇಖನ: ಡಾ. ಸುರೇಶ ಜಿ.
ಹಿರಿಯ ಸಹಾಯಕ ನಿರ್ದೇಶಕರು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಯಚೂರು.
ಲೇಖನ: ಡಾ.ಸುರೇಶ ಜಿ.
ಹಿರಿಯ ಸಹಾಯಕ ನಿರ್ದೇಶಕರು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಯಚೂರು.
ಲೇಖಕರು - ಶ್ರೀಮತಿ ಡಿ. ಕೋಮಲ, ರಾಯಚೂರು ಗುರುಶ್ರೀ ವಿ. ಎಸ್. ಕಾಂತನವರ ಅವರು ಕನ್ನಡ ಮತ್ತು ಹಿಂದಿ ಎರಡೂ…
ರಾಯಚೂರು: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ವೇಳೆ ಅಧಿಕಾರಿಗಳೊಂದಿಗೆ ವಿಶ್ವವಿದ್ಯಾಲಯದಲ್ಲಿ ಪ್ರಗತಿಯಲ್ಲಿರುವ ವಿವಿಧ ಪ್ರಮುಖ ಅಭಿವೃದ್ಧಿ…
ರಾಯಚೂರು: ರಾಯಚೂರು ಗ್ರಾಮೀಣ ಕ್ಷೇತ್ರದ ಮಟಮಾರಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಮ್ಯಾಕ್ರೋ ಯೋಜನೆಯಡಿ ₹3…
ಸಿರವಾರ: ಸಚಿವ ಸತೀಶ ಜಾರಕಿಹೊಳಿ ಅವರ ಮೇಲೆ ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತವಾಗಿ ED ದಾಳಿ ನಡೆಸಿದೆ ಎಂದು ಆರೋಪಿಸಿ,…
ರಾಯಚೂರು: ನಗರದ ಪೋತಗಲ್ ರಸ್ತೆಯ ಮನೆಯೊಂದರಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ ಘಟನೆ…
ರಾಯಚೂರು: ನಗರದ ವಾರ್ಡ್ ನಂ.22ರಲ್ಲಿ ಜೆಡಿಎಸ್ ಮುಖಂಡ ರಾಮನಗೌಡ ಏಗನೂರು ಅವರು ಭಾನುವಾರ ಮನೆ-ಮನೆಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳನ್ನು…